
ಶಬರಿಮಲೆಯಲ್ಲಿ ಜನವೋ ಜನವೋ. ನಿರೀಕ್ಷೆಗೂ ಮೀರಿದ ಭಕ್ತಾದಿಗಳು. ಅಯ್ಯಪ್ಪನ ಸನ್ನಿಧಾನದಲ್ಲಿ ಒಂಚೂರು ಜಾಗನೇ ಕಾಣ್ತಿಲ್ಲ. ಎಲ್ ನೋಡಿದ್ರು ಭಕ್ತಾದಿಗಳ ತಲೆಗಳೇ ಕಾಣುವಷ್ಟು ನೂಕುನುಗ್ಗಲು. ಕಣ್ಣೀರು, ಗೋಳಾಟದ ದೃಶ್ಯಗಳು. ಓರ್ವ ಬಾಲಕಿಯ ಸಾವು. ಕೆಲವ್ರಿಗೆ ಗಾಯ. ಅಷ್ಟಕ್ಕೂ ಶಬರಿಮಲೆಯಲ್ಲಿ ಇಷ್ಟೊಂದು ಕಷ್ಟಕರ ಪರಿಸ್ಥತಿ ನಿರ್ಮಾಣ ಆಗಿದ್ದೇಕೆ? ಯಾಕಿಷ್ಟು ಜನ ಸೇರಿದ್ದು?.
ಯಾಕೀ ಈ ರೋಧನೆ? ಯಾಕೀ ಈ ಯಾತನೆ? ಯಾಕಿ ಈ ನೋವು? ನಿಜಕ್ಕೂ ಶಬರಿಮಲೆಯಲ್ಲಿ ಏನಾಗ್ತಿದೆ? ಏನ್ ನಡೀತಿದೆ? ಅಯ್ಯಪ್ಪನ ಸನ್ನಿಧಾನದಲ್ಲಿ ಇದ್ದಕ್ಕಿದ್ದಂತೆ ಏನಾಯ್ತು? ಸದ್ಯ ಶಬರಿಮಲೆಯಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ಅಯ್ಯಪ್ಪ ದರ್ಶನಕ್ಕಾಗಿ ಹೋದ ಭಕ್ತಾದಿಗಳು ಸ್ವಾಮಿಯ ದರ್ಶನ ಮಾಡದೇ ಹಿಂತಿರುಗುತ್ತಿದ್ದಾರೆ. 18 ಮೆಟ್ಟಿಲುಗಳ ಸ್ಪರ್ಶನೂ ಮಾಡದೇ ವಾಪಸ್ ಆಗ್ತಿದ್ದಾರಂತೆ. ಎಲ್ಲಿ ನೋಡಿದ್ರೆ ಜನ, ಕಣ್ಣಾಯಿಸಿದಷ್ಟು ಅಯ್ಯಪ್ಪ ಮಾಲಾಧಾರಿಗಳು ಕಾಣಿಸ್ತಿದ್ದಾರೆ. ಅಯ್ಯಪ್ಪನ ಘೋಷಣೆಗಿಂತ ಗಲಾಟೆ ಜೋರಾಗಿದೆ. ಕಿರುಚಾಟವೇ ದೊಡ್ಡದಾಗಿದೆ. ಶಬರಿಮಲೆಯಲ್ಲಿ ಸದ್ಯದ ಪರಿಸ್ಥಿತಿ ಭಯಾನಕವಾಗಿದೆ
ತಂದೆಯನ್ನ ಹುಡುಕಿದ ಬಾಲಕ.. ಮನಮುಟ್ಟಿದ ದೃಶ್ಯ!
ಅಯ್ಯಪ್ಪನ ದರ್ಶನಕ್ಕಾಗಿ ಬಂದಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗಂಟೆ ಗಟ್ಟಲೆ ಸಾಲಿನಲ್ಲಿ ನಿಂತಿದ್ದ ಬಾಲಕಿ ಕುಸಿದು ಬಿದ್ದಿದ್ದಾಳಂತೆ. ಈ ವೇಳೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಅಯ್ಯಪ್ಪ ಮಾಲೆ ಧರಿಸಿರುವ ಪುಟ್ಟ ಬಾಲಕ ತನ್ನ ತಂದೆಯನ್ನ ಕಾಣದೇ ಕಂಗಾಲಾಗಿದ್ದಾನೆ. ಬಸ್ ಹತ್ತಿ ಕೂತಿರುವ ಬಾಲಕ ತಂದೆ ಬಾರದ ಹಿನ್ನೆಲೆ ಕಣ್ಣೀರಿಟ್ಟಿದ್ದಾನೆ. ಆಮೇಲೆ ತಂದೆ ಬಂದು ಸಂತೈಸಿದ್ದಾರೆ ಎನ್ನಲಾಗಿದೆ. ಆದರೆ ಈ ದೃಶ್ಯ ಮಾತ್ರ ಪ್ರತಿಯೊಬ್ಬರ ಮನಸ್ಸನ್ನ ಕರಗಿಸುವಂತಿದೆ..
ಇನ್ನು ಕೆಲವು ಕಡೆ ಹೊಡೆದಾಟವೇ ಆಗೋಗಿದೆ. ಪೊಲೀಸರು ಮತ್ತು ಭಕ್ತಾಧಿಗಳ ನಡುವೆ ಗಲಾಟೆ ಆಗಿದೆ. ನೂಕು ನುಗ್ಗಲು ವೇಳೆ ಭಕ್ತಾಧಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಬಂದಿದೆ. ಗಾಯಗೊಂಡ ಭಕ್ತಾಧಿಗಳು ಆಡಳಿತ ಮಂಡಳಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಬರಿಮಲೆಯಲ್ಲಿ ನಿಜಕ್ಕೂ ಏನಾಯ್ತು? ಯಾಕೆ ಈ ಗೊಂದಲ?
ಶಬರಿಮಲೆಯಲ್ಲಿ ಇಷ್ಟೆಲ್ಲ ಗೊಂದಲ ಆಗೋಕೆ ಕಾರಣ ನಿರೀಕ್ಷೆಗೂ ಮೀರಿದ ಭಕ್ತಾಧಿಗಳು ಬಂದಿದ್ದು. ಸೀಸನ್ಗಿಂತ ಹೆಚ್ಚು ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತಾದಿಗಳು ಶಬರಿಮಲೆಗೆ ಭೇಟಿ ಕೊಟ್ಟಿದ್ದರಿಂದ ಇಂಥ ಕಷ್ಟಕರ ಪರಿಸ್ಥಿತಿ ಸೃಷ್ಟಿಯಾಯಿತು ಎನ್ನಲಾಗಿದೆ.
ಒಂದೇ ಸಮಯದಲ್ಲಿ ಭಕ್ತಾದಿಗಳು ಹೆಚ್ಚಾದ ಹಿನ್ನೆಲೆ ಪರಿಸ್ಥಿತಿ ನಿಭಾಯಿಸುವಲ್ಲಿ ಆಡಳಿತ ಮಂಡಳಿ ಹಾಗೂ ಪೊಲೀಸರು ಎಡವಿದ್ದು, ಅಲ್ಲಲ್ಲಿ ಕೆಲವು ಅನಾಹುತಗಳು ಸಂಭವಿಸೋಕೆ ಕಾರಣವಾಗಿದೆ. 2 ವಾರದಿಂದ ಪ್ರತಿನಿತ್ಯ 50 ಸಾವಿರ ಭಕ್ತಾದಿಗಳು ಬರ್ತಿದ್ದರಂತೆ. ಆದ್ರೆ ದಿಢೀರ್ ಅಂತ 90 ಸಾವಿರಕ್ಕೂ ಹೆಚ್ಚು ಹೆಚ್ಚು ಭಕ್ತಾಧಿಗಳು ಅಯ್ಯಪ್ಪ ಸನ್ನಿಧಾನಕ್ಕೆ ಬಂದ ಹಿನ್ನೆಲೆ ಇಷ್ಟು ದೊಡ್ಡ ಮಟ್ಟದಲ್ಲಿ ಜನಜಂಗುಳಿ ಸೃಷ್ಟಿಯಾಗಿದೆ.
ನಿಂತುಕೊಳ್ಳೋದಕ್ಕೂ ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿ ಕ್ಯೂನಲ್ಲಿದ್ದವರ ನಡುವೆ ನೂಕು ನುಗ್ಗಲು ಉಂಟಾಗಿದೆ. ಗಂಟೆ ಗಟ್ಟಲೇ ಭಕ್ತಾಧಿಗಳು ನಿಂತ ಕಡೆಯೇ ನಿಲ್ಲಬೇಕಾಯಿತು. ಊಟ, ತಿಂಡಿ ಇಲ್ಲದೇ ಸೊರಗಬೇಕಾಯಿತು. ಕೆಲವು ಕಡೆ ಕುಡಿಯೋಕೆ ನೀರು ಸಹ ಸಿಕ್ಕಿಲ್ಲ. ಇದರಿಂದ ಶಬರಿಮಲೆಯಲ್ಲಿ ದೊಡ್ಡ ಕೋಲಾಹಲ ಉಂಟಾಯಿತು ಎನ್ನಲಾಗಿದೆ.


