
ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಸುತ್ತೂರು ಜಾತ್ರಾ ಮಹೋತ್ಸವವು ಫೆಬ್ರವರಿ 6 ರಿಂದ 11ರವರೆಗೆ ಶ್ರೀ ಸುತ್ತೂರು ಕ್ಷೇತ್ರ ಮೈಸೂರು ಜಿಲ್ಲೆಯಲ್ಲಿ ನೆಡೆಯಲಿದೆ.
ದಿವ್ಯ ಸಾನ್ನಿಧ್ಯ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಸುತ್ತೂರು ಕ್ಷೇತ್ರ ವಹಿಸಲಿದ್ದಾರೆ.
ಸಹಸ್ರ ಸಂವತ್ಸರಗಳ ಹಿಂದೆ ಕಪಿಲಾ ನದೀತೀರದಲ್ಲಿ ಶ್ರೀ ಸುತ್ತೂರು ಕ್ಷೇತ್ರವನ್ನು ತಮ್ಮ ದಿವ್ಯ ತಪಸ್ಸಿನಿಂದ ಸಂಸ್ಥಾಪಿಸಿ ಬೆಳಗಿದ ಮಹಾಮಹಿಮರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು 2024ರ ಫೆಬ್ರವರಿ 6ರಿಂದ 11ರವರೆಗೆ ನಡೆಯಲಿದೆ.
ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸಿ ಆಟಗಳು, ದೋಣಿವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ಛಾಯಾಚಿತ್ರ ಸ್ಪರ್ಧೆ ಮೊದಲಾದವುಗಳು ಜರುಗುತ್ತವೆ. ವರ್ಣರಂಜಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳು ನಡೆಯಲಿವೆ.
ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಡಿನ ಪೂಜ್ಯ ಮಠಾಧೀಶರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯದ ಸಚಿವರುಗಳು, ಸಂಸದರು, ಶಾಸಕರು, ಕಲಾವಿದರು, ಪ್ರಗತಿಪರ ರೈತರು ಹಾಗೂ ಗಣ್ಯರನ್ನು ಆಹ್ವಾನಿಸಲಾಗುತ್ತದೆ.
ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಇರುತ್ತದೆ.
ಭಕ್ತಾದಿಗಳಿಗೆ ಶ್ರೀಕ್ಷೇತ್ರದಲ್ಲಿ ತಾತ್ಕಾಲಿಕ ವಸತಿಯ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ.


