ಬೇಲೂರು : ನಮ್ಮ ದೇಶದ ಶ್ರೀಮಂತ ಸಂಸ್ಕತಿ ಆದ್ಯಾತ್ಮಿಕವನ್ನು ತೆರದಿಟ್ಟ ಮಹಾನ್ ವ್ಯಕ್ತಿ ಎಂದರೆ ನಮ್ಮ ಸ್ವಾಮಿ ವಿವೇಕಾನಂದರು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.

ಪಟ್ಟಣದ ಬಿಜಿಎಸ್ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿವೇಕಾನಂದ ಜನ್ಮದಿನಾಚರಣೆ ಹಾಗೂ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಯುವಜನತೆ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು, ಪ್ರತಿ ಫಲಾಪೇಕ್ಷೆಯಿಲ್ಲದ ಸಮಾಜ ಸೇವೆಗೆ ಮುಂದಾದರೆ, ವಿವೇಕಾನಂದರ ಕನಸ್ಸಿನ ಭಾರತ ನಿರ್ಮಾಣವಾಗಬಹುದು ಎಂದು ಹೇಳಿದರು.

ಆತ್ಮವಿಶ್ವಾಸದ ಕೆಲಸದಿಂದ ಮುಂದಾಗುವ ವ್ಯಕ್ತಿ ಚರಿತ್ರಾ ಪುಟದಲ್ಲಿ ಸ್ಥಾನ ಪಡೆಯುತ್ತಾನೆ. ಪ್ರತಿಯೊಬ್ಬರೂ ಸಿಕ್ಕಿದ ಅವಕಾಶವನ್ನು ಎರಡು ಕೈಯಿಂದ ಅಪ್ಪಿಕೊಂಡಾಗ ಮಾತ್ರ ಸಾಧನೆ ಮೆಟ್ಟಿಲೇರಬಹುದು ಎಂದರು.ದುಡಿಯುವವರು ಮಾತ್ರ ಈ ದೇಶದ ಸಂಪತ್ತು ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆಯಿದೆ. ನಮ್ಮ ದೇಶದ ಜ್ಞಾನ ಸಂಪತ್ತು ಇತ್ತೀಚಿನ ದಿನಗಳಲ್ಲಿ ಪರದೇಶಗಳಿಗೆ ವ್ಯಾಮೋಹಕ್ಕೆ ಬಲಿಯಾಗಿ ತಮ್ಮ ಜ್ಞಾನ ಸಂಪತ್ತನ್ನು ಅಲ್ಲಿಗೆ ನೀಡುತ್ತಿರುವುದು ನಿಜಕ್ಕೂ ಶೋಚನೀಯ ಎಂದು ವಿಷಾದ ವ್ಯಕ್ತಪಡಿಸಿದರು.

ಅಲ್ಲದೆ ಸರ್ಕಾರವೂ ಕೂಡ ಗ್ರಾಮೀಣ ಭಾರತದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ ಎಂದರು. ದೇಶದ ಅಭಿವೃದ್ಧಿಯಲ್ಲಿ ಯುವಶಕ್ತಿಯ ಸದ್ಬಳಕೆಯಾಗಬೇಕಾಗಿದೆ. ಯುವಜನತೆ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ನಂತರ ಮಾತನಾಡಿದ ಬಿಜಿಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ದಿವ್ಯಕುಮಾರ್ ಮಾತನಾಡಿ ನಾವು ಒಂದೊದು ಮಹಾನೀಯರ ದಿನಾಚರಣೆ ವಿಶೇಷವಾಗಿ ಆಚರಿಸುತ್ತೇವೆ.ಆದರೆ ಸ್ವಾಮಿ ವಿವೇಕಾನಂದರ ದಿನಾಚರಣೆಯನ್ನು ಯುವಶಕ್ತಿ ದಿನವನ್ನಾಗಿ ಆಚರಿಸುವ ಉದ್ದೇಶ ಯುವ ಜನಾಂಗವೇ ನಮಗೆ ದೇಶದ ಬಹುದೊಡ್ಡ ಆಸ್ತಿ ಎಂದ ಅವರು ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯ ಗಳನ್ನು ಇಚ್ಚಾಶಕ್ತಿಯಿಂದ ಮಾಡಿದಾಗ ಈ ಯುವ ಶಕ್ತಿಗೆ ಒಂದು ಅರ್ಥ ಬರುತ್ತದೆ.

ಸ್ವಾಮಿ ವಿವೇಕಾನಂದರು ಅಳವಡಿಸಿಕೊಂಡಿರುವ ಮೌಲ್ಯಗಳನ್ನು ಹಾಗೂ ಅವರು ನಮ್ಮ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರು ಕಂಡಂತ‌ ಕನಸು ನನಸಾಗಲಿದೆ ಎಂದರು.

ಇದೆ ವೇಳೆ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಪುರಸಭೆ ಅಧ್ಯಕ್ಷರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಭವ್ಯ,ಸೀಮಾ, ಕೀರ್ತಿ,ಸುರೇಶ್,ತೇಜಸ್ವಿನಿ,ನಾಗರತ್ನ,ಪ್ರಿಯಾಂಜ ಹಾಗೂ ಮಹೇಶ್ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *