
ಬೇಲೂರು :- ಕರ್ನಾಟಕ ಜಾನಪದ ಪರಿಷತ್ತು ಬೇಲೂರು ತಾಲ್ಲೂಕು ಘಟಕದಿಂದ ಪಟ್ಟಣದ ಶಾಂತಲಾ ಮಹಿಳಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ವೇದಿಕೆಯಲ್ಲಿನ ಗಣ್ಯರು ಉದ್ಘಾಟನೆ ನಡೆಸಿಕೊಟ್ಟರು.
ಕರ್ನಾಟಕ ಜಾನಪದ ಪರಿಷತ್ತು ಬೇಲೂರು ತಾಲ್ಲೂಕು ಘಟಕದ ಅಧ್ಯಕ್ಷ ವೈ.ಸಿ.ಸಿದ್ದೇಗೌಡ ಮಾತನಾಡಿ, ಜಾನಪದ ಎಲ್ಲಾ ಸಾಹಿತ್ಯಕ್ಕೆ ಅಡಿಪಾಯವಾಗಿದೆ. ವಿಶೇಷವಾಗಿ ಜಾನಪದದ ಮೂಲ ಸಂಸ್ಕೃತಿಗೆ ಮಹಿಳೆಯರ ಪಾತ್ರ ದೊಡ್ಡದು ಅದ ಕಾರಣ ಜಾನಪದ ಪರಿಷತ್ತು ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ.ಈ ನಿಟ್ಟಿನಲ್ಲಿ ಪರಿಷತ್ತು ಜನಪರ ಕಾರ್ಯಕ್ರಮ ರೂಪಿಸುವ ಬಗ್ಗೆ ತಿಳಿಸಿದರು.
ಸಮಾರಂಭವನ್ನು ಉದ್ಘಾಟನೆ ನಡೆಸಿ ಮಾತನಾಡಿದ ಸಮಾಜಮುಖಿ ಚಿಂತಕಿ ಸೌಮ್ಯ ಅನಂದ್, ಇತ್ತೀಚಿನ ದಿನದಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿರುವುದು ಅಗಮ್ಯವಾಗಿದೆ.ಅದರೂ ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಪರಿಸ್ಥಿತಿಗಳನ್ನು ಮೆಟ್ಟಿ ನಿಲ್ಲಲು ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ. ಅದ್ದರಿಂದ ಮಹಿಳೆಯರು ಉನ್ನತ ಹುದ್ದೆಗೆ ಲಗ್ಗೆ ಇಡುವ ಮೂಲಕ ಉತ್ತಮ ಸಾದನೆ ಮಾಡಿ ಎಂದು ಕರೆ ನೀಡಿದರು.
ಪತ್ರಕರ್ತ ಹೆಬ್ಬಾಳು ಹಾಲಪ್ಪ, ಮಾತನಾಡಿ,ಮಹಿಳೆಯರಿಗೆ ಮೊದಲು ಸಮಾನತೆ ನೀಡಿದ್ದು ೧೨ ಶತಮಾನದ ಬಸವಾದಿ ಶರಣರು, ಕಾರಣ ಅನುಭವ ಮಂಟಪದಲ್ಲಿ ಅವರಿಗೆ ಪುರುಷರಷ್ಟು ಸಮಾನತೆ ನೀಡಿ ಗೌರವಿಸಿದ್ದಾರೆ ಅಂದಿನಿಂದ ಇಲ್ಲಿಯವರೆಗೆ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ದೊಡ್ಡ ಸಾದನೆ ಮಾಡಿದ್ದಾರೆ. ಅಧುನಿಕ ಸಮಾಜದಲ್ಲಿ ಇಂದಿಗೂ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಾ ಸಮಾಜದಲ್ಲಿ ಲಿಂಗಾನುಪಾತಕ್ಕೆ ಕಾರಣವಾಗಿದೆ. ಇಂತಹ ಕೃತ್ಯದ ಬಗ್ಗೆ ಸಂಬಂಧಿಸಿದ ಹೆಚ್ಚು ಗಮನ ನೀಡಬೇಕು ಎಂದರು.
ಶಾಂತಲಾ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಡಾ. ಛಾಯಾ ಎಸ್ ಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗಿ ವೇದಿಕೆಯಲ್ಲಿ ಮಾತನಾಡಿ ಸುಮ್ಮನಿದ್ದರೆ ಸಾಲದು. ವರ್ಷಪೂರ್ತಿ ಹೆಣ್ಣು ಮಕ್ಕಳನ್ನು ಗೌರವಿಸುವ ಬಗ್ಗೆ ಇಂತಹ ಕಾರ್ಯಕ್ರಮ ಮುಂದಾಗಬೇಕಿದೆ.ಇಂದು ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಮಹಿಳೆ ಮತ್ತು ಜಾನಪದ ಎಂಬ ಶೀರ್ಷಿಕೆ ಅಡಿಯಲ್ಲಿ ಉತ್ತಮ ಕಾರ್ಯಕ್ರಮ ರೂಪಿಸಿದ್ದಾರೆ. ಜಾನಪದದಲ್ಲಿ ಹೆಣ್ಣಿನ ಪಾತ್ರ ಹಿರಿದು, ಅದ ಕಾರಣ ಜಾನಪದ ಅಧ್ಯಯನ ಹೆಚ್ಚಾಗಿ ನಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಹೆಚ್.ಮಲ್ಲಾಪುರ ಸಹ ಶಿಕ್ಷಕಿ ಕೆ.ಎನ್.ಲೀಲಾವತಿ, ನಿವೃತ್ತ ಸಹ ಶಿಕ್ಷಕಿ ಎಂ.ಶಶಿಕಲಾ, ಸಾಹಿತಿ ಇಂದಿರಮ್ಮ ಜಾನಪದ ಮತ್ತು ಅಧುನಿಕ ಮಹಿಳೆಯ ಬಗ್ಗೆ ಮಾತನಾಡಿದರು.
ಉಳಿದಂತೆ ಕಾರ್ಯಕ್ರಮದಲ್ಲಿ ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಧನಂಜಯ್, ಉಪನ್ಯಾಸಕ ಮೋಹನ್, ಮತ್ತು ಸುಜಯ್ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

