ಹಾಸನ : ಸಮಾಜದಲ್ಲಿ ಮಹಿಳೆ ಇರುವುದರಿಂದ ಪುರುಷನು ಯಶಸ್ವಿಯಾಗಿ ಗುರಿ ಸಾಧಿಸಲು ಸಾಧ್ಯವಾಗಿದೆ ಎಂದು ಕನ್ನಡ ಚಲನಚಿತ್ರದ ನಾಯಕಿ ನಟಿ ಶೃತಿ ಅಭಿಪ್ರಾಯಪಟ್ಟರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಸರಕಾರಿ, ಅರೆಸರಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಹಾಸನ ಜಿಲ್ಲಾ ರಾಜ್ಯ ಸರಕಾರಿ ನೌಕರರ ಕೋ-ಆಪರೇಟಿವ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದ ನಂತರ ದಿವಂಗತ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಫಾರ್ಚನೆ ನೆರವೇರಿಸಿ ಅವರ ಪೋಟೊ ಅನಾವರಣಗೊಳಿಸಿದ ನಂತರ ಉದ್ದೇಶಿಸಿ ಮಾತನಾಡಿದ ಅವರು,

ಸಮಾಜದಲ್ಲಿ ಮಹಿಳೆಯರಿಗೆ ಅನುಕಂಪಕ್ಕಿಂತ ಅವಕಾಶ ನೀಡಬೇಕು. ಎಲ್ಲಾ ರಂಗಗಳಲ್ಲಿ ಮಹಿಳೆಯರು ಬಹು ಸಂಖ್ಯಾತ ರಾಗಬೇಕು. ಆತ್ಮಸ್ಥೈರ್ಯ ಕಳೆದುಕೊಂಡರೆ ಬದುಕು ಅಸಾದ್ಯ. ಆತ್ಮ ಸ್ಥೈರ್ಯ ಗಟ್ಟಿಯಾಗಿ ಇದ್ದರೆ ಸಮಾಜದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು. ಕುಟುಂಬದ ಹಂತದಲ್ಲೇ ಮಹಿಳೆಯರಿಗೆ ಪುರುಷರಿಗೆ ಸಮಾನ ಸ್ಥಾನಮಾನ, ಹಾಗೂ ಅವಕಾಶ ನೀಡುವ ದಿನಗಳು ಬರಬೇಕು. ಅಮೆರಿಕ ದೇಶದಲ್ಲಿ ಹೆಚ್ಚು ಕಾಲ ದುಡಿಸಿಕೊಳ್ಳುತ್ತಿದ್ದ ವೇಳೆ ತಮಗಾಗಿ ಒಂದು ದಿನವನ್ನು ಮೀಸಲಿಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಆರಂಭವಾದ ದಿನವೇ ಮಹಿಳಾ ದಿನಾಚರಣೆ ಹುಟ್ಟಲು ಕಾರಣವಾಗಿದೆ.

ಪ್ರತಿಯೊಬ್ಬ ಯಶಸ್ವಿ ಪುರುಷನ ಜೊತೆ ಜೊತೆಗೆ ಮಹಿಳೆ ಇರುವ ಕಾರಣದಿಂದಲೇ ಪುರುಷರು ಸಾಧಿಸಲು ಸಾಧ್ಯವಾಗುತ್ತದೆ, ಪುರುಷರ ಜೊತೆ ಜೊತೆಯಾಗಿ ನಡೆದು ಪುರುಷರನ್ನು ಸಾಧನೆಯ ಹಾದಿಯಲ್ಲಿ ಕೊಂಡೊಯ್ದ ದಿನಗಳು ಹೆಚ್ಚಿವೆ ಎಂದು ಕಿವಿಮಾತು ಹೇಳಿದರು. ಆರತಿಗೆ ಒಬ್ಬಳು ಕೀರ್ತಿಗೆ ಒಬ್ಬಳು ಎಂಬ ಗಾದೆ ಮಾತು ಎಲ್ಲೆಡೆ ಜನಜನಿತ ಆದರೆ ಇತ್ತೀಚಿನ ದಿನಗಳಲ್ಲಿ ದೇಶಕ್ಕೆ ಕೀರ್ತಿ ತರುವ ನಿಟ್ಟಿನಲ್ಲಿ ಮಹಿಳೆಯರು ಸಾಧನೆ ಮಾಡಿರುವ ಸಾಕಷ್ಟು ಉದಾಹರಣೆಗಳು ಇಂದು ನಮ್ಮ ಕಣ್ಣ ಮುಂದೆ ಇವೆ ಎಂದು ಸಲಹೆ ನೀಡಿದರು.

ನಂಬಿಕೆ ಎಂಬ ಕುದುರೆ ಏರಿ, ವಿದ್ಯೆ ಎಂಬ ಆಯುಧ ಬಳಸಿಕೊಂಡು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕು, ಜೊತೆಗೆ ಮಹಿಳೆಯರು ಆರ್ಥಿಕವಾಗಿ ಕೂಡ ಪ್ರಭಲ ರಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ಸರಕಾರಿ, ಅರೆಸರಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ನಮ್ಮ ತಾತನ ಕಾಲದಲ್ಲಿ ಮಹಿಳೆಯರು ಎಂದರೇ ಶೋಷಣೆ ಇತ್ತು. ಈಗ ಅವು ಯಾವುದು ಇಲ್ಲ. ಎಲ್ಲಾ ರಂಗದಲ್ಲೂ ಮಹಿಳೆಯರು ಇದ್ದಾರೆ. ಯಾವ ಮನೆಯಲ್ಲಿ ಮಹಿಳೆ ಶಾಂತಿಯುತವಾಗಿ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ ಆ ಮನೆ ನೆಮ್ಮದಿಯಿಂದ ಇರುತ್ತದೆ ಎಂದರು.

ಅಭಿವೃದ್ದಿ ಇಲಾಖೆಯ ಹೆಚ್.ಕೆ. ಪುಷ್ಪಲತಾ ಮಾತನಾಡಿ, ಮಾರ್ಚ್ ತಿಂಗಳು ಬಂದರೆ ತುಂಬಾ ಕಡೆ ಮಹಿಳಾ ದಿನಾಚರಣೆ ವಿವಿಧೆಡೆ ಆಚರಿಸಲಾಗುತ್ತದೆ ಆದರೆ ಮತ್ತೆ ಮುಂದಿನ ವರ್ಷದ ಮಾರ್ಚ್‌ಗೆ ಕಾಯುವ ಪರಿಸ್ಥಿತಿ ಇದೆ. ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲಾ ಸಂಕೊಲೆಯನ್ನು ಕಳಚಿ ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಇಂದು ಛಾಪು ಮೂಡಿಸಿದ್ದಾರೆ ಮುಂದಿನ ದಿನಗಳಲ್ಲಿ ಕೂಡ ಮಹಿಳೆಯರಿಗೆ ವಿಶೇಷ ಮನ್ನಣೆ ನೀಡುವ ದಿನಗಳು ಬರಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮಂಜುಳಾ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಮಹಿಳೆಯರೇ ಛಾಪು ಮೂಡಿಸಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಎಸ್ಪಿ, ಥಾಸಿಲ್ದಾರ್ ಸೇರಿದಂತೆ ಬಹುತೇಕ ಅಧಿಕಾರಿಗಳು ಮಹಿಳೆಯರೇ ಆಗಿದ್ದಾರೆ. ಆದರೆ ಈ ನಡುವೆಯೂ ಇಂದಿಗೂ ಹೆಣ್ಣು ಭ್ರೂಣ ಹತ್ಯೆ ಆಗುತ್ತಿಯವುದು ಬೇಸರದ ವಿಚಾರ, ಇಂತಹ ದಿನಗಳು ದೂರಾಗಿ ಮಹಿಳೆಯರಿಗೆ ವಿಶೇಷ ಮನ್ನಣೆ ನೀಡುವ ದಿನಗಳು ಬರಲಿ ಎಂದರು.

ಇದೇ ವೇಳೆ ಸ್ತ್ರೀರೋಗ ತಜ್ಞೆ ಡಾ. ಎ. ಸಾವಿತ್ರಿ ಹಾಗೂ ಮನೋರೋಗ ತಜ್ಞೆ ಡಾ.ಸುನೀತಾ ಮಹಿಳೆಯರಿಗೆ ಆರೋಗ್ಯ ಸಂರಕ್ಷಣೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾಗಿ ದುಡಿಯುತ್ತಿರುವ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ಮಹಿಳೆಯರು ಹಾಗೂ ಸಂಘದ ಮಹಿಳಾ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೆ ಸಂದರ್ಭದಲ್ಲಿ ಮಾಜಿ ಶಾಸಕ ಪ್ರೀತಂ ಜೆ. ಗೌಡರ ಪತ್ನಿ ಕಾವ್ಯ ಪ್ರೀತಂ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಕಿರಣ್, ಚನ್ನರಾಯಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎನ್. ದೀಪಾ, ಹಿಮ್ಸ್ ಆಸ್ಪತ್ರೆಯ ಡಾ. ಸುನೀತಾ, ಹಾಸನ ಜಿಲ್ಲಾ ಸರಕಾರಿ ನೌಕರರ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎನ್. ಪರಮೇಶ್, ಉಪಾಧ್ಯಕ್ಷ ಆರ್. ಶಿವೇಗೌಡ, ಗೌರವಾಧ್ಯಕ್ಷ ಆರ್.ಸಿ. ಭೈರಪ್ಪ, ಬಿ.ಎನ್. ರಾಜಶೇಖರ್, ಗೌರವ ಕಾರ್ಯದರ್ಶಿ ಸತೀಶ್, ನಿರ್ದೇಶಕರಾದ ಎಸ್. ಮಧು, ಬಿ.ಆರ್. ಧರ್ಮ, ಕೆ.ಕೆ. ಸಿಂಧು, ಕೆ.ಎಸ್. ಲಾವಣ್ಯ ಇತರರು ಉಪಸ್ಥಿತರಿದ್ದರು. ಲಕ್ಷ್ಮೀನಾರಾಯಣ್ ಕಾರ್ಯಕ್ರಮ ನಿರೂಪಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *