
ಸಕಲೇಶಪುರ : ದೇಶದ ಎಲ್ಲಾ ಜನರಿಗೂ ಸಮಾನತೆಯ ಸ್ವಾತಂತ್ರವನ್ನು ತಂದು ಕೊಡುವಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಪಾತ್ರ ದೊಡ್ಡದು.ಅವರ ಜೀವನದ ಆದರ್ಶಗಳು ಎಲ್ಲರಿಗೂ ದಾರಿ ದೀಪ ಆಗಲಿ. ಎಂದು ಉಪ ವಿಭಾಧಿಕಾರಿ ಡಾ. ಶೃತಿ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಸಕಲೇಶಪುರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವರತ್ನ ಮಹಾನ್ ಮಾನವತವಾದಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಕಚೇರಿ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ಅವರ ಪುತ್ತಳಿಕೆಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿ ನಂತರ ಕೇಕ್ ಕಟ್ ಮಾಡುವ ಮೂಲಕ ಜನ್ಮ ಆಚರಣೆ ದಿನವನ್ನು ಆಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ವಿಭಾಗಾಧಿಕಾರಿ ಡಾ. ಶ್ರುತಿ ಅವರು ಮಾತನಾಡುತ್ತಾ ” ದೇಶದಲ್ಲಿ ಎಲ್ಲರೂ ಸಮಾನತೆಯಾಗಿ ಬದುಕಲು ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರ ಕೊಟ್ಟ ಸಂವಿಧಾನ ಅತಿ ಮುಖ್ಯವಾಗಿದೆ. ಅವರು ತಮ್ಮ ಕಷ್ಟದ ಜೀವನದಲ್ಲೂ ಕೂಡ ಭಾರತಕ್ಕೆ ಅತ್ಯಂತ ಸದೃಢವಾದ ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ಕೊಟ್ಟಿದ್ದಾರೆ. ಅವರ ಜೀವನದ ಕಷ್ಟ ದಿನಗಳನ್ನು ನಾವು ತಿಳಿದುಕೊಳ್ಳುವ ಮೂಲಕ ಸಂವಿಧಾನವನ್ನು ಅರ್ಥ ಮಾಡಿಕೊಂಡು ಅದಕ್ಕೆ ಗೌರವ ಸಲ್ಲಿಸುವ ಮೂಲಕ ಈ ದಿನಾಚರಣೆಗೆ ಗೌರವ ಸಲ್ಲಿಸಬೇಕು. ಎಂದರು.
ನಂತರ ಮಾತನಾಡಿದ ತಾಲೂಕು ದಂಡಾಧಿಕಾರಿ ಮೇಘನ.ಜಿ ಅವರು ” ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರು ಕಷ್ಟದಲ್ಲಿ ಅರಳಿದ ಪ್ರತಿಭೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರು ಅದನ್ನು ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಮುಂದೆ ಬರಬೇಕು. ಎಂಬುದಕ್ಕೆ ಇವರೇ ಉದಾಹರಣೆ. ಇವರು ಕೇವಲ ದೇಶದಲ್ಲದೆ ಇಡೀ ವಿಶ್ವಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ. ಇವರ ಸಾಧನೆ ಯುವಕರಿಗೆ ಮಾದರಿಯಾಗಬೇಕು.ರಾಜ್ಯಕೀಯ ಸಮಾನತೆ ಇದ್ದರೂ ಕೂಡ ಸಾಮಾಜಿಕ ಸಮಾನತೆ ಎಂಬುದು ಇನ್ನೂ ಪೂರ್ತಿಯಾಗಿಲ್ಲ. ಸಾಧನೆಗೆ ಇನ್ನೊಂದು ಹೆಸರೇ ಡಾ. ಬಿ.ಆರ್ ಅಂಬೇಡ್ಕರ್. ಅವರ ಜೀವನ ಆದರ್ಶಗಳು ಎಲ್ಲರಿಗೂ ಮಾದರಿಯಾಗಲಿ ಎಂದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಆನಂದ್ ಮೂರ್ತಿ ಮಾತಾಡುತ್ತಾ ” ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಒಂದು ಜಾತಿಗೆ ಸೀಮಿತ ಮಾಡಬಾರದು. ವಿದ್ಯಾವಂತರು ಸಂವಿಧಾನದಲ್ಲಿ ನೀಡಿರುವ ಮತದಾನದ ಹಕ್ಕನ್ನು ಸರಿಯಾಗಿ ಉಪಯೋಗಿಸಿ ಕೊಳ್ಳಬೇಕು. ಅವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಸಂವಿಧಾನಕ್ಕೆ ಗೌರವ ಕೊಡುವುದರಿಂದ ಇಂತಹ ಆಚರಣೆ ಅರ್ಥಪೂರ್ಣ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿಗಳು, ತಾಲೂಕಿನ ದಲಿತ ಮುಖಂಡರು ನೆರೆದಿದ್ದರು.

