ಸಕಲೇಶಪುರ : ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇದಕ್ಕೆ ಮೂಗುದಾರ ತೊಡಿಸುವವರು ಯಾರು ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.ಪಟ್ಟಣದ ಸುತ್ತ ಹರಿಯುವ ಹೇಮಾವತಿ ನದಿಯ ಪಾತ್ರದಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಡಿಯೋ, ಫೋಟೋ ಹಾಗೂ ಪತ್ರಿಕಾ ವರದಿಗಳ ಮೂಲಕ ಹಲವು ಬಾರಿ ತಂದಿದ್ದರೂ ಇದುವರೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಮಳಲಿ ಲೇಔಟ್ ಸಮೀಪದಲ್ಲಿ ಸಂಗ್ರಹಿಸಲಾಗಿರುವ ಸುಮಾರು ನೂರಕ್ಕೂ ಹೆಚ್ಚು ಲೋಡ್ ಮರಳನ್ನು ಇದುವರೆಗೆ ಅಧಿಕಾರಿಗಳು ವಶಕ್ಕೆ ಪಡೆಯದ ಕಾರಣ ಮರಳನ್ನು ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ .

ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ, ಸಂಬಂಧಪಟ್ಟ ಇಲಾಖೆಗಳು ಮರಳನ್ನು ಜಪ್ತಿ ಮಾಡುವುದನ್ನು ಬಿಟ್ಟು ಪ್ರಕರಣ ದಾಖಲಿಸುವುದಲ್ಲಿಯೂ ನಿರ್ಲಕ್ಷ್ಯ ತೋರಿವೆ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನೇ ಲಾಭವಾಗಿ ಮಾಡಿಕೊಂಡಿರುವ ಅಕ್ರಮ ಮರಳುಗಾರರು ಹಗಲು–ರಾತ್ರಿ ಎನ್ನದೆ ನಿರ್ಬಂಧವಿಲ್ಲದೆ ಮರಳು ಸಾಗಾಟ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಸೋಮವಾರ ಮುಂಜಾನೆ ಪಟ್ಟಣದ ಅಜಾದ್ ರಸ್ತೆಯಲ್ಲಿರುವ ಭುವನೇಶ್ವರಿ ವೃತ್ತದ ಸಮೀಪ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಒಂದು ವಾಹನ ಕೆಟ್ಟುಹೋದ ಹಿನ್ನೆಲೆಯಲ್ಲಿ ಅದರಲ್ಲಿದ್ದ ಮರಳನ್ನು ರಸ್ತೆ ಮೇಲೆಯೇ ಸುರಿದು ವಾಹನವನ್ನು ಅಲ್ಲಿಂದ ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ.

ಮರಳು ಸುರಿದಿರುವ ಸ್ಥಳವು ಉಪವಿಭಾಗಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿ ಹಾಗೂ ಪೊಲೀಸ್ ಠಾಣೆಗೆ ಸುಮಾರು 200 ಮೀಟರ್ ದೂರದಲ್ಲಿದ್ದರೂ ಇದುವರೆಗೆ ಅಧಿಕಾರಿಗಳು ಅಥವಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮರಳನ್ನು ಜಪ್ತಿ ಮಾಡಿಲ್ಲ ಎಂಬುದಾಗಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ನೆಪಮಾತ್ರಕ್ಕೆ ಒಂದೆರಡು ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುತ್ತಾರೆ. ಆದರೆ ವಾಸ್ತವದಲ್ಲಿ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲದವರ ವಾಹನಗಳನ್ನು ಮಾತ್ರ ಬೆನ್ನಟ್ಟಿ ಪ್ರಕರಣ ದಾಖಲಿಸಲಾಗುತ್ತದೆ. ಹೊಂದಾಣಿಕೆ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂಬ ಆರೋಪವನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.ಅ

ಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹೇಮಾವತಿ ನದಿ ಪರಿಸರವನ್ನು ಉಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆದರೆ ಈ ವಿಷಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜಾನ್ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *