
ಸಕಲೇಶಪುರ:-ಸರ್ಕಾರಿ ಹಾಗೂ ಹೊರಗುತ್ತಿಗೆ ನೌಕರರು ಮತ್ತು ಕಾರ್ಯನಿರತ ಪತ್ರಕರ್ತರಿಗೆ ಮನರಂಜನೆ ಹಾಗೂ ಒಗ್ಗಟ್ಟಿನ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾದ ‘ಅಫೀಷಿಯಲ್ಸ್ ಕ್ರಿಕೆಟ್ ಲೀಗ್’ ಪಂದ್ಯಾವಳಿ ನಗರದಲ್ಲಿನ ಸುಭಾಷ್ ಮೈದಾನದಲ್ಲಿ ಎರಡು ದಿನಗಳ ಕಾಲ ಭರ್ಜರಿಯಾಗಿ ನಡೆಯಿತು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, TV46 ಕನ್ನಡ ಹಾಗೂ ಫಾಸ್ಟ್ ನ್ಯೂಸ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಈ ಪಂದ್ಯಾವಳಿಯಲ್ಲಿ ಒಟ್ಟು 13 ತಂಡಗಳು ಭಾಗವಹಿಸಿ ಕ್ರೀಡಾಭಿಮಾನಿಗಳಿಗೆ ರೋಚಕ ಪಂದ್ಯಗಳನ್ನು ನೀಡಿದವು.
ಪಂದ್ಯಾವಳಿಗೆ ಸಿಮೆಂಟ್ ಮಂಜುನಾಥ್ ಉದ್ಘಾಟನೆ ನೆರವೇರಿಸಿದ್ದು ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಸಿಮೆಂಟ್ ಮಂಜು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಅತ್ಯಂತ ಅಗತ್ಯವೆಂದು ಹೇಳಿದರು.
ಈ ರೀತಿಯ ಕ್ರೀಡಾ ಕಾರ್ಯಕ್ರಮಗಳು ಪ್ರತಿವರ್ಷವೂ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮಾಜಿ ಸಚಿವರು ಹಾಗೂ ಮಾಜಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಮಾತನಾಡಿ, ಕ್ರೀಡೆಗಳು ಶಾರೀರಿಕ ಮತ್ತು ಮಾನಸಿಕ ಬಲವರ್ಧನೆಗೆ ಸಹಕಾರಿ ಆಗಿದ್ದು, ಸ್ನೇಹ, ಸಹಭಾಗಿತ್ವ ಮತ್ತು ಒಗ್ಗಟ್ಟಿನ ಸಂಕೇತವಾಗಿವೆ.ವಿವಿಧ ಪ್ರದೇಶಗಳಿಂದ ಬಂದು ಕೆಲಸ ಮಾಡುವವರ ನಡುವೆ ಸ್ನೇಹಭಾವ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತವೆ ಎಂದು ಹೇಳಿದರು.
ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಮುರುಳಿ ಮೋಹನ್ ಮಾತನಾಡಿ, ಕ್ರೀಡಾ ಮೂಲಕ ಎಲ್ಲರನ್ನು ಒಗ್ಗೂಡಿಸುವ ಕಾರ್ಯ ಶ್ಲಾಘನೀಯವಾಗಿದೆ.ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಪತ್ರಕರ್ತರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಜಿತ ಅಧ್ಯಕ್ಷ ಸುಧೀರ್ ಎಸ್. ಎಲ್ ಮಾತನಾಡಿ ಸರ್ಕಾರಿ ನೌಕರರಿಗಾಗಿ ಇದೆ ಪ್ರಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು ಪಂದ್ಯಾವಳಿ ಬಹಳ ಅಚ್ಚುಕಟ್ಟಾಗಿ ನಡೆದಿದೆ.ಇದಲ್ಲದೆ ಸಂಘದ ವತಿಯಿಂದ ಎಸ್. ಎಸ್ ಎಲ್. ಸಿ ಪರೀಕ್ಷೆ 2026 ರಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ 3 ವಿದ್ಯಾರ್ಥಿಗಳನ್ನು ಗೌರವಿಸಿದ್ದೇವೆ.ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಪಂದ್ಯಾವಳಿಯಲ್ಲಿ ಪವರ್ ಯುನೈಟೆಡ್ (ಹಾಸನ – KEB) ತಂಡ ಪ್ರಥಮ ಸ್ಥಾನ ಪಡೆದು ₹33,333 ನಗದು ಬಹುಮಾನ ಮತ್ತು ಪಾರಿತೋಷಕ ಪಡೆದರೆ, ಆರೋಗ್ಯ ಇಲಾಖೆ ತಂಡ ದ್ವಿತೀಯ ಸ್ಥಾನ ಪಡೆದು ₹22,222 ಬಹುಮಾನ ಪಡೆದುಕೊಂಡಿತು.
ಪ್ರತಿ ಪಂದ್ಯಕ್ಕೂ ‘ಪಂದ್ಯ ಶ್ರೇಷ್ಠ’, ನೀಡಲಾಗಿದ್ದು ‘ಉತ್ತಮ ಬ್ಯಾಟರ್’, ‘ಉತ್ತಮ ಬೌಲರ್’ ಹಾಗೂ ‘ಉತ್ತಮ ಫೀಲ್ಡರ್’ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಲಾಯಿತು.
ವಿಶೇಷವಾಗಿ ಪತ್ರಕರ್ತ ಅರುಣ್ ಕರಡಿಗಾಲ ರಚಿಸಿದ ರಾಪ್ ಸಾಂಗ್ ಎಲ್ಲಾರ ಗಮನ ಸೆಳೆಯಿತು.
ಇದೇ ಸಂದರ್ಭದಲ್ಲಿ ತಾಲೂಕಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಅತ್ಯಧಿಕ ಅಂಕ ಗಳಿಸಿದ ಮಾನಸಿ, ನವಮಿ, ಪ್ರಿಯಾ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮದನ್ ಗೌಡ, ಹಲೋ ಹಾಸನ್ ಪತ್ರಿಕೆ ಸಂಪಾದಕ ರವಿ ನಾಕಲಗೋಡು,ಟಿವಿ 46ನ ಸಂಪಾದಕ ಜೈಭೀಮ್ ಮಂಜು, ಉಮೇಶ್, ಫಾಸ್ಟ್ ಟಿವಿಯ ಕಿರಣ್, ಕರವೇ ಗಗನ್, ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳು ಸಾರ್ವಜನಿಕರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.




