
ಸಕಲೇಶಪುರ : ರಾಜ್ಯ ಸರ್ಕಾರ ಇತ್ತೀಚೆಗೆ ಕೆಲವು ಮದ್ಯ ಬ್ರ್ಯಾಂಡ್‌ಗಳ ದರದಲ್ಲಿ ಏರಿಕೆ ಹಾಗೂ ಇಳಿಕೆ ಮಾಡಿರುವ ಹಿನ್ನೆಲೆ, ತಾಲ್ಲೂಕಿನ ಕೆಲವು ಮದ್ಯದ ಅಂಗಡಿಗಳಲ್ಲಿ ಗ್ರಾಹಕರಿಗೆ ಸರಿಯಾದ ದರದಲ್ಲಿ ಮದ್ಯ ಮಾರಾಟವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಬೆಲೆ ಏರಿಕೆಗೊಂಡ ಮದ್ಯಗಳಿಗೆ ಹೊಸ ದರವನ್ನು ತಕ್ಷಣ ಜಾರಿಗೆ ತಂದಿರುವ ಅಂಗಡಿಗಳು, ಬೆಲೆ ಇಳಿಕೆಗೊಂಡ ಮದ್ಯಗಳ ದರವನ್ನು ಮಾತ್ರ ಕಡಿಮೆ ಮಾಡದೇ ಹಳೆಯ ದರದಲ್ಲೇ ಮಾರಾಟ ಮಾಡುತ್ತಿರುವುದಾಗಿ ಮದ್ಯಪ್ರಿಯರು ದೂರಿದ್ದಾರೆ. ಇದರಿಂದ ಗ್ರಾಹಕರಿಗೆ ಆರ್ಥಿಕ ನಷ್ಟವಾಗುತ್ತಿದ್ದು, ಅಂಗಡಿಗಳ ವಿರುದ್ಧ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
“ಸರ್ಕಾರ ಅಧಿಕೃತವಾಗಿ ದರ ಇಳಿಕೆ ಮಾಡಿದ್ದರೂ ಕೆಲವು ಅಂಗಡಿಗಳು ಅದನ್ನು ಜಾರಿಗೆ ತರದೇ ಹೆಚ್ಚುವರಿ ಹಣ ವಸೂಲಿ ಮಾಡುತ್ತಿವೆ. ಇದು ಗ್ರಾಹಕರಿಗೆ ನೇರ ವಂಚನೆ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಾದ್ಯಂತ ಈ ಕುರಿತು ಚರ್ಚೆ ಜೋರಾಗಿದ್ದು, ಸಂಬಂಧಪಟ್ಟ ಅಬಕಾರಿ ಇಲಾಖೆ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ, ಎಲ್ಲಾ ಮದ್ಯದ ಅಂಗಡಿಗಳಲ್ಲಿ ನೂತನ ದರಪಟ್ಟಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
