
ಸಕಲೇಶಪುರ:- ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರ ಸಂಘದ 2024-26ನೇ ಸಾಲಿನ 17ನೇ ಮಾಸಿಕ ಸಭೆಯು ಸಂಘದ ಅಧ್ಯಕ್ಷ ವಿ.ಪಿ. ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಜೂನ್ 5ರಂದು ವಳಲಹಳ್ಳಿಕೂಡಿಗೆಯ ಹೆಚ್.ಡಿ. ದೇವೇಗೌಡ ವಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಗೊಳಿಸುವ ಕುರಿತು ಚರ್ಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಬೆಳೆಗಾರರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಆದಿಚುಂಚನಗಿರಿ ಆಸ್ಪತ್ರೆ, ವೈಚಾರಿಕ ಸಂಜೆ ದಿನಪತ್ರಿಕೆ, ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಸಕಲೇಶಪುರ ಘಟಕ ಹಾಗೂ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಶಿಬಿರದಲ್ಲಿ ಹೃದ್ರೋಗ, ಮಧುಮೇಹ, ಕಣ್ಣು, ಕಿವಿ-ಮೂಗು-ಗಂಟಲು, ಕೀಲು-ಮೂಳೆ, ಶಸ್ತ್ರಚಿಕಿತ್ಸೆ ಹಾಗೂ ಸ್ತ್ರೀರೋಗ ವಿಭಾಗದ ತಜ್ಞ ವೈದ್ಯರು ಉಚಿತ ತಪಾಸಣೆ ಮತ್ತು ಸಲಹೆ ನೀಡಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸುಮಾರು 1,500ಕ್ಕೂ ಹೆಚ್ಚು ಸಾರ್ವಜನಿಕರು ಹಾಗೂ 50ಕ್ಕೂ ಹೆಚ್ಚು ವೈದ್ಯರು ಶಿಬಿರದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಆಗಮಿಸುವ ಸಾರ್ವಜನಿಕರಿಗೆ ಬೆಳೆಗಾರರ ಸಂಘದ ವತಿಯಿಂದ ಊಟದ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದಕ್ಕಾಗಿ ಅಗತ್ಯ ವೆಚ್ಚವನ್ನು ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ದಾನಿಗಳ ಸಹಕಾರದೊಂದಿಗೆ ಭರಿಸಲು ನಿರ್ಧರಿಸಲಾಯಿತು.ಇದೇ ವೇಳೆ ಸಂಘದ ನೂತನ ಕಚೇರಿ ಉದ್ಘಾಟನೆಗೆ ಸಂಬಂಧಿಸಿದ ಪೂರ್ವಸಿದ್ಧತೆಗಳ ಕುರಿತು ಚರ್ಚೆ ನಡೆಯಿತು.
2026-28ನೇ ಸಾಲಿನ ಎಚ್‌ಡಿಪಿಎ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾಗಿರುವ ಸುಬ್ಬಣ್ಣ ಗೌಡ (ಬೊಮ್ಮನಹಳ್ಳಿ) ಅವರನ್ನು ಸಭೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ನಿರ್ದೇಶಕರು ಹಾಗೂ ಬೆಳೆಗಾರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
