ಸಕಲೇಶಪುರ : ಹಲವಾರು ದಶಕಗಳಿಂದ ಸಮರ್ಪಕ ರಸ್ತೆ ಸೌಲಭ್ಯವಿಲ್ಲದೆ ಗ್ರಾಮಕ್ಕೆ ಸಂಚಾರವೇ ದುಸ್ತರವಾಗಿದ್ದ ಹುಲಿಯಮ್ಮ ಬಡಾವಣೆಯ ನಿವಾಸಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಶಾಸಕ ಸಿಮೆಂಟ್ ಮಂಜು, ಸುಮಾರು ₹80 ಲಕ್ಷ ವೆಚ್ಚದ ನೂತನ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

ಗ್ರಾಮಸ್ಥರು ರಸ್ತೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ ಬೆನ್ನಲ್ಲೇ, ಒಂದು ವಾರದ ಹಿಂದೆ ಶಾಸಕ ಮಂಜು ಸ್ವತಃ ಸುಮಾರು ಮೂರು ಕಿಲೋಮೀಟರ್ ಹದಗೆಟ್ಟ, ಗುಂಡಿಗಳಿಂದ ಕೂಡಿದ್ದ ರಸ್ತೆಯಲ್ಲಿ ಸಂಚರಿಸಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದ್ದರು. ಅಂದು ನೀಡಿದ್ದ ಭರವಸೆಯಂತೆ ಇದೀಗ ರಸ್ತೆ ಕಾಮಗಾರಿಗೆ ಚಾಲನೆ ನೀಡಿರುವುದು ಗ್ರಾಮಸ್ಥರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಈ ವೇಳೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು, “ಗ್ರಾಮೀಣ ಪ್ರದೇಶದ ಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ. ಗ್ರಾಮಸ್ಥರ ಬೇಡಿಕೆಯಂತೆ ಗುಣಮಟ್ಟದ ರಸ್ತೆ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಹಕ್ಕುಪತ್ರ, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.

ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದು, ರಸ್ತೆಗಳ ಕೊರತೆ, ಶೌಚಾಲಯ ಸೌಲಭ್ಯಗಳ ಅಭಾವ, ಸುತ್ತಲೂ ದಟ್ಟ ಅರಣ್ಯ ಹಾಗೂ ಆನೆ ಹಾವಳಿಯಿಂದ ಜನಜೀವನ ಸಂಕಷ್ಟಕ್ಕೀಡಾಗಿದೆ. ಶಾಲೆಗೆ ತೆರಳುವ ಮಕ್ಕಳಿಗೂ, ಪಡಿತರ ಸೇರಿದಂತೆ ಅಗತ್ಯ ವಸ್ತುಗಳನ್ನು ತರಲು ಗ್ರಾಮಸ್ಥರಿಗೂ ತೀವ್ರ ತೊಂದರೆ ಎದುರಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಗಮನಿಸಿ ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಶಾಸಕರು ಹೇಳಿದರು.

ಗ್ರಾಮದ ಯುವ ಮುಖಂಡ ಪುಟ್ಟು ಮಾತನಾಡಿ, “ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸಿಮೆಂಟ್ ಮಂಜು ಹಗಲಿರುಳು ಶ್ರಮಿಸುತ್ತಿದ್ದಾರೆ. ನಮ್ಮ ಗ್ರಾಮಸ್ಥರ ಮನವಿಗೆ ತ್ವರಿತವಾಗಿ ಸ್ಪಂದಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿರುವುದು ಸಂತಸದ ಸಂಗತಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್, ಬಿಜೆಪಿ ಮುಖಂಡರಾದ ದೊಡ್ಡದಿಣ್ಣೆ ಜಯಪ್ರಕಾಶ್, ಗೋಪಿನಾಥ್, ವನಜಾಕ್ಷಿ, ಶಿವಕುಮಾರ್, ಬಾಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಕೇಶ್, ಬಾಗೆ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ರಾಕೇಶ್ ಕಾಕನಮನೆ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *