ಸಕಲೇಶಪುರ: ವಿಶೇಷ ಚೇತನರು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವ ಉದ್ದೇಶದಿಂದ ತಾಲೂಕು ಪಂಚಾಯಿತಿಯ 2025–26ನೇ ಸಾಲಿನ ಅನುದಾನದಡಿ ಏಳು ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದ ಅವರು, ಸಕಲೇಶಪುರ ತಾಲೂಕು ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದು, ಗ್ರಾಮೀಣ ಭಾಗದ ವಿಶೇಷ ಚೇತನರಿಗೆ ಸಂಚಾರವೇ ದೊಡ್ಡ ಸವಾಲಾಗಿದೆ. ಅನೇಕ ಗ್ರಾಮಗಳಿಗೆ ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಸುಮಾರು ₹9.77 ಲಕ್ಷ ವೆಚ್ಚದಲ್ಲಿ ಏಳು ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದ್ದು, ಇದರಿಂದ ಫಲಾನುಭವಿಗಳು ಸ್ವಾವಲಂಬಿ ಜೀವನ ನಡೆಸಲು ನೆರವಾಗಲಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ತಾಲೂಕು ಪಂಚಾಯಿತಿ ಆರೋಗ್ಯ ಅನುದಾನದಡಿ ಸುಮಾರು ₹ 91 ಲಕ್ಷ ವೆಚ್ಚದಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಉಪಕರಣಗಳನ್ನು ವಿತರಿಸಲಾಗುತ್ತಿದೆ. ನಾಲ್ಕು ಸಿಬಿಸಿ (CBC) ಯಂತ್ರಗಳು, ನಾಲ್ಕು ಇಸಿಜಿ (ECG) ಯಂತ್ರಗಳು, 11 ಹಾಟ್ ಅಂಡ್ ಕೋಲ್ಡ್ ವಾಟರ್ ಪ್ಯೂರಿಫೈಯರ್‌ಗಳು ಹಾಗೂ ನಾಲ್ಕು ಎಲೆಕ್ಟ್ರಿಕ್ ಗೀಸರ್‌ಗಳನ್ನು ದೇವಾಲದಕೆರೆ, ಹಾಲೇಬೇಲೂರು, ಶುಕ್ರವಾರಸಂತೆ, ಕೆಲಗಳಲೆ, ಕುಂಬರಡಿ, ಕೂಡರಸ್ತೆ, ಚಂಗಡಹಳ್ಳಿ, ಹೆತ್ತೂರು, ಅತ್ತಿಹಳ್ಳಿ, ಬಾಳುಪೇಟೆ ಹಾಗೂ ಕ್ಯಾಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉತ್ತಮ ಆರೋಗ್ಯ ಸೇವೆ ಲಭ್ಯವಾಗಲಿದೆ ಎಂದು ಹೇಳಿದರು.

ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳ ಸುರಕ್ಷತೆಗಾಗಿ ಸುಮಾರು ₹29 ಲಕ್ಷ ವೆಚ್ಚದಲ್ಲಿ 24 ಸೌರಶಕ್ತಿ ಆಧಾರಿತ ಹೈಮಾಸ್ಟ್ ದೀಪಗಳನ್ನು ವಿವಿಧ ಗ್ರಾಮಗಳಲ್ಲಿ ಅಳವಡಿಸಲಾಗುತ್ತಿದೆ ಎಂದ ಅವರು, ಬಾಗೆ, ಹೆತ್ತೂರು, ಕುರುಬತ್ತೂರು, ಬಾಳುಪೇಟೆ, ಉಚ್ಚಂಗಿ, ದೇವಲಕೆರೆ, ಐಗೂರು, ವನಗೂರು, ಕ್ಯಾನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಸರ್ಕಾರದಿಂದ ದೊರೆಯುವ ಅನುದಾನವನ್ನು ಜನಪರವಾಗಿ ಸದ್ಬಳಕೆ ಮಾಡಿಕೊಂಡು ವಿಶೇಷ ಚೇತನರು, ಹಿರಿಯ ನಾಗರಿಕರು ಹಾಗೂ ಗ್ರಾಮೀಣ ಜನತೆಗೆ ಅಗತ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಕಲ್ಪಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್, ಸಿಬ್ಬಂದಿ ವನರಾಜ್, ಬಿಜೆಪಿ ಮುಖಂಡರಾದ ಟಿ. ರಾಜ್‌ಕುಮಾರ್, ಹೆತ್ತೂರು ಮಹೇಶ್, ಅಗ್ನಿ ಸೋಮಶೇಖರ್, ವಿನಯ್, ಪ್ರಗತಿ, ಸತ್ಯಜಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *