
ಸಕಲೇಶಪುರ: ತಾಲ್ಲೂಕಿನ ಬೆಳಗೋಡು ಹೋಬಳಿಯ ಕೆಲವಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಉಷಾ ಸುರೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ನಂತರ ಮಾತನಾಡಿದ ಅಧ್ಯಕ್ಷೆ ಉಷಾ ಸುರೇಶ್ ‘ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಸಂಘದ ನಿರ್ದೇಶಕರು ಹಾಗೂ ಸದಸ್ಯರ ಸಹಕಾರದಿಂದ ಸಂಘ ಉತ್ತಮವಾಗಿ ಮುನ್ನಡೆಯುತ್ತಿದೆ. ಹೈನುಗಾರಿಕೆಯಿಂದ ಮಹಿಳೆಯರಿಗೆ ನಿರಂತರ ಆದಾಯ ದೊರೆಯುತ್ತಿದ್ದು, ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ’ ಎಂದರು.
ಸಂಘದ ಕಾರ್ಯದರ್ಶಿ ದಿವ್ಯ ಉದಯ ಮಾತನಾಡಿ, ‘ಹೈನುಗಾರಿಕೆ ಗ್ರಾಮೀಣ ಕುಟುಂಬಗಳ ಆರ್ಥಿಕತೆಗೆ ಪ್ರಮುಖ ಆಧಾರವಾಗಿದೆ. ಹಸು ಸಾಕಾಣಿಕೆಯಿಂದ ಹಾಲಿನ ಜೊತೆಗೆ ಗೊಬ್ಬರ ದೊರೆಯುವುದರಿಂದ ಕೃಷಿಗೂ ಅನುಕೂಲವಾಗುತ್ತದೆ. ಪ್ರತಿಯೊಂದು ಮನೆಯಲ್ಲೂ ಹೈನುಗಾರಿಕೆಯನ್ನು ವ್ಯವಸ್ಥಿತವಾಗಿ ಬೆಳೆಸಿಕೊಂಡರೆ ಕುಟುಂಬದ ಆದಾಯ ಹೆಚ್ಚಿಸಿಕೊಳ್ಳಬಹುದು’ ಎಂದರು.
ಹಾಸನ ಹಾಲು ಒಕ್ಕೂಟದ ಮಾರ್ಗವಿಸ್ತರಣಾಧಿಕಾರಿ ಎಚ್.ಆರ್. ಅಣ್ಣಪ್ಪ ಮಾತನಾಡಿ, ‘ಸರ್ಕಾರ ಹಾಗೂ ಹಾಲು ಒಕ್ಕೂಟದಿಂದ ದೊರೆಯುವ ವಿವಿಧ ಸವಲತ್ತುಗಳನ್ನು ಸದಸ್ಯರು ಸಮರ್ಪಕವಾಗಿ ಬಳಸಿಕೊಂಡು ಹೈನುಗಾರಿಕೆಯಲ್ಲಿ ಆದಾಯ ಹೆಚ್ಚಿಸಿಕೊಳ್ಳಬೇಕು. ಗ್ರಾಮಸ್ಥರು ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿಗೆ ಕೈಜೋಡಿಸಿದರೆ ಸಂಘವನ್ನು ಇನ್ನಷ್ಟು ವ್ಯವಸ್ಥಿತವಾಗಿ ಮುನ್ನಡೆಸಬಹುದು. ಸಂಘದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಸುಮಾರು ₹ 1-3 ಲಕ್ಷದವರೆಗೆ ಹಸು ಸಾಕಾಣಿಕೆ ಸಹಾಯಧನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ 2025–26ನೇ ಸಾಲಿನ ಹಣಕಾಸು ವ್ಯವಹಾರಗಳ ಖರ್ಚು–ವೆಚ್ಚಗಳ ವಿವರವನ್ನು ಮಂಡಿಸಿ, ಸದಸ್ಯರಿಂದ ಅನುಮೋದನೆ ಪಡೆದುಕೊಂಡರು. ಸಂಘದ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಂಡಿರುವುದಕ್ಕೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ನಿರ್ದೇಶಕರುಗಳಾದ ಜಯಮ್ಮ ರಾಜಾಶೇಖರ್, ಅನ್ನಪೂರ್ಣ ರಾಜಣ್ಣ, ಲಲಿತ ನಾರಾಯಣ ರೈ, ಇಂದ್ರಮ್ಮ ಮಂಜ್ಜೆಗೌಡ, ತೀರ್ಥವತಿ ಬಾಬೇಶ್, ಹೇಮಾ ಉಮೇಶ್,ಸದಸ್ಯರು ಮಲ್ಲೇಶ್, ಧರ್ಮಪ್ಪ, ಸುದೀಶ್, ಗ್ರಾಮಸ್ಥರು ಭಾಗವಹಿಸಿದ್ದರು.
