
ಬೆಂಗಳೂರು: ಕಸ್ತೂರಿರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಬದಲು ಮಲೆನಾಡಿನ ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿ, ಭೌತಿಕ ಸಮೀಕ್ಷೆ ನಡೆಸಿದ ಬಳಿಕವೇ ಮುಂದಿನ ತೀರ್ಮಾನ ಕೈಗೊಳ್ಳಬೇಕು. ಪರಿಸರ ಸಂರಕ್ಷಣೆಯ ಜತೆಗೆ ತಲೆತಲಾಂತರಗಳಿಂದ ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ರೈತರು ಹಾಗೂ ಬೆಳೆಗಾರರ ಹಿತವನ್ನೂ ಸರ್ಕಾರ ಕಾಪಾಡಬೇಕು ಎಂದು ಸಕಲೇಶಪುರ–ಆಲೂರು ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದರು.
ಸೋಮವಾರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಅರಣ್ಯಕ್ಕೆ ಸಂಬಂಧಿಸಿದ ವಿವಿಧ ಕಾಯ್ದೆಗಳು, ಸೆಕ್ಷನ್–4, ಮೀಸಲು ಅರಣ್ಯ, ಡೀಮ್ಡ್ ಫಾರೆಸ್ಟ್ ಸೇರಿದಂತೆ ಹಲವು ನಿರ್ಬಂಧಗಳಿಂದ ಮಲೆನಾಡಿನ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಮಧ್ಯೆ ಕಸ್ತೂರಿರಂಗನ್ ವರದಿಯ ಶಿಫಾರಸುಗಳು ಯಥಾವತ್ತಾಗಿ ಜಾರಿಯಾದರೆ ಜನರಲ್ಲಿ ಮತ್ತಷ್ಟು ಆತಂಕ ಉಂಟಾಗಲಿದೆ ಎಂದು ಹೇಳಿದರು.
ಕೃಷಿಯೇ ಬದುಕಿನ ಆಧಾರ: ಮಲೆನಾಡಿನಲ್ಲಿ ಕಾಫಿ, ಏಲಕ್ಕಿ, ಮೆಣಸು, ಭತ್ತ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆಯೇ ಜನರ ಪ್ರಮುಖ ಜೀವನಾಧಾರ. ಕಾಫಿ ತೋಟಗಳ ನಿರ್ವಹಣೆಗೆ ಮರಗಳ ಕೊಂಬೆ ಕತ್ತರಿಸುವುದು, ಬೇಲಿ ನಿರ್ಮಿಸುವುದು ಸೇರಿದಂತೆ ಅಗತ್ಯ ಕೃಷಿ ಚಟುವಟಿಕೆಗಳಿಗೂ ಅರಣ್ಯ ಇಲಾಖೆಯಿಂದ ತೊಂದರೆ ಎದುರಾಗುತ್ತಿದೆ. ವಾಸ್ತವವಾಗಿ ಅರಣ್ಯ ಮತ್ತು ಪರಿಸರವನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದರಲ್ಲಿ ಮಲೆನಾಡಿನ ರೈತರು ಹಾಗೂ ಬೆಳೆಗಾರರ ಪಾತ್ರ ದೊಡ್ಡದು ಎಂದು ಮಂಜು ಪ್ರತಿಪಾದಿಸಿದರು.
ಉಪಗ್ರಹ ಆಧಾರಿತ ಸಮೀಕ್ಷೆಯಿಂದ ಸ್ಥಳೀಯ ವಾಸ್ತವ ಪರಿಸ್ಥಿತಿಯನ್ನು ಪೂರ್ಣವಾಗಿ ಗುರುತಿಸಲು ಸಾಧ್ಯವಿಲ್ಲ. ಕೃಷಿ ಜಮೀನು, ಕಾಫಿ ಹಾಗೂ ಅಡಕೆ ತೋಟಗಳು, ಜನವಸತಿ ಪ್ರದೇಶಗಳು, ಶಾಲೆ, ಅಂಗನವಾಡಿ, ಆಸ್ಪತ್ರೆ ಮತ್ತು ದೇವಾಲಯಗಳಿರುವ ಪ್ರದೇಶಗಳೂ ವಿವಿಧ ಅರಣ್ಯ ವರ್ಗೀಕರಣದೊಳಗೆ ಸೇರಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಕೇರಳ ಮಾದರಿಯಲ್ಲಿ ಗ್ರಾಮ ಪಂಚಾಯಿತಿಗಳಿಂದ ನಿರ್ಣಯ ಪಡೆದು, ಸ್ಥಳ ಪರಿಶೀಲನೆ ಹಾಗೂ ಭೌತಿಕ ಸಮೀಕ್ಷೆ ನಡೆಸಿ ನೈಜ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಮೂಲಸೌಕರ್ಯಕ್ಕೂ ಅರಣ್ಯ ಇಲಾಖೆ ಅಡ್ಡಿಮಲೆನಾಡಿನ ಹಲವು ಕುಗ್ರಾಮಗಳಿಗೆ ಇಂದಿಗೂ ಸಮರ್ಪಕ ರಸ್ತೆ ಮತ್ತು ಸಾರಿಗೆ ಸಂಪರ್ಕವಿಲ್ಲ. ರೈತರು ತಮ್ಮ ಕೃಷಿ ಜಮೀನಿಗೆ ಗೊಬ್ಬರ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಕಿಲೋಮೀಟರ್‌ಗಟ್ಟಲೆ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಜಲಜೀವನ್ ಮಿಷನ್‌ನಡಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ ಅಥವಾ ಗ್ರಾಮೀಣ ರಸ್ತೆ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿಯೂ ಅರಣ್ಯ ಇಲಾಖೆಯ ಅನುಮತಿಗಾಗಿ ದೀರ್ಘಕಾಲ ಕಾಯಬೇಕಾಗಿದೆ ಎಂದು ಸದನದ ಗಮನ ಸೆಳೆದರು.
“ಒಂದು ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆಯ ಅನುಮತಿ ಪಡೆಯಲು ಸುಮಾರು ಒಂದೂವರೆ ವರ್ಷ ಓಡಾಡಬೇಕಾದ ಪರಿಸ್ಥಿತಿ ಎದುರಿಸಿದ್ದೇನೆ. ಜಂಟಿ ಸರ್ವೆ ನಡೆಸಬೇಕೆಂದರೂ ತಿಂಗಳುಗಟ್ಟಲೆ, ವರ್ಷಗಟ್ಟಲೆ ವಿಳಂಬವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಲೆನಾಡಿನ ಅಭಿವೃದ್ಧಿ ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.
ಎತ್ತಿನಹೊಳೆ ಸೇರಿದಂತೆ ಬೃಹತ್ ಯೋಜನೆಗಳು ಹಾಗೂ ವಿದ್ಯುತ್ ಯೋಜನೆಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ತೆರವುಗೊಳಿಸುವಾಗ ಅವಕಾಶ ನೀಡಲಾಗುತ್ತದೆ. ಆದರೆ ಗ್ರಾಮಸ್ಥರ ಮೂಲಸೌಕರ್ಯ, ಕೃಷಿ ಹಾಗೂ ಕುಡಿಯುವ ನೀರಿನಂತಹ ಸಣ್ಣಪುಟ್ಟ ಕಾಮಗಾರಿಗಳಿಗೆ ನಿರ್ಬಂಧ ಎದುರಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರ ಸ್ಥಳೀಯ ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ವನ್ಯಜೀವಿ ಹಾವಳಿಯಿಂದ ಕೃಷಿ ತೊರೆಯುವ ಸ್ಥಿತಿಮಲೆನಾಡಿನಲ್ಲಿ ಆನೆ, ಕಾಡುಕೋಣ ಮತ್ತು ಕಾಡುಹಂದಿಗಳ ಹಾವಳಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಲವು ಕಡೆ ರೈತರು ಜಮೀನಿಗೆ ತೆರಳುವುದಕ್ಕೂ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಕಾಡಂಚಿನ ತೋಟಗಳಿಗೆ ಕೆಲಸಗಾರರು ಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗ್ಗೆ ತೋಟಕ್ಕೆ ತೆರಳಿದವರು ಸುರಕ್ಷಿತವಾಗಿ ಸಂಜೆ ಮನೆಗೆ ಮರಳುವ ಭರವಸೆಯೂ ಇಲ್ಲದಂತಹ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಆನೆ ದಾಳಿಯಿಂದ ಈಗಾಗಲೇ ಅನೇಕ ಜೀವಗಳು ಬಲಿಯಾಗಿವೆ. ವನ್ಯಜೀವಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ಬೇಲಿ ನಿರ್ಮಿಸಲು ಮುಂದಾದರೂ ಅರಣ್ಯ ನಿಯಮಗಳು ಅಡ್ಡಿಯಾಗುತ್ತಿವೆ. ಒಂದೆಡೆ ವನ್ಯಜೀವಿಗಳ ಹಾವಳಿ, ಮತ್ತೊಂದೆಡೆ ಅರಣ್ಯ ಕಾನೂನುಗಳ ನಿರ್ಬಂಧ—ಇವೆರಡರ ಮಧ್ಯೆ ಮಲೆನಾಡಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ಸೆಕ್ಷನ್–4 ವ್ಯಾಪ್ತಿಯಿಂದ ಜನರಿಗೆ ಸಂಕಷ್ಟಸಕಲೇಶಪುರ ಭಾಗದಲ್ಲಿ ಈಗಾಗಲೇ ಸೆಕ್ಷನ್–4 ಸೇರಿದಂತೆ ವಿವಿಧ ಅರಣ್ಯ ನಿರ್ಬಂಧಗಳಿಂದ ಹಲವು ಗ್ರಾಮಗಳ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅಗ್ನಿ, ಜಂಬರಡಿ, ಕ್ಯಾಮನಹಳ್ಳಿ, ಕಾಡುಮನೆ ಎಸ್ಟೇಟ್, ಅಚ್ಚನಹಳ್ಳಿ, ನಡಳ್ಳಿ, ಮರ್ಜನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾವಿರಾರು ಎಕರೆ ಭೂಮಿ ಸೆಕ್ಷನ್–4 ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಮನೆ ನಿರ್ಮಾಣ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಅಗತ್ಯಗಳಿಗೂ ತೊಂದರೆಯಾಗುತ್ತಿದೆ ಎಂದು ಮಂಜು ಸದನದಲ್ಲಿ ವಿವರಿಸಿದರು.
ಸಕಲೇಶಪುರ ಭಾಗದ ಸುಮಾರು 31 ಗ್ರಾಮಗಳ 374.172 ಚದರ ಕಿ.ಮೀ. ಪ್ರದೇಶಕ್ಕೆ ಸಂಬಂಧಿಸಿದ ಅರಣ್ಯ ನಿರ್ಬಂಧಗಳು ಜನರಲ್ಲಿ ಆತಂಕ ಮೂಡಿಸಿವೆ ಎಂದು ಹೇಳಿದ ಅವರು, ಅಚ್ಚನಹಳ್ಳಿ, ಅಗ್ನಿ, ಆಲುವಳ್ಳಿ, ಅರಣೆ, ಅತ್ತಿಹಳ್ಳಿ, ಬಾಣಗೆರೆ, ಬಾಳೆಯಳ್ಳಿ, ಬಟ್ಟೆಕುಮಾರಿ, ದೇವಿಹಳ್ಳಿ, ಎಗ್ಗದ್ದೆ, ಹೊಸಹಳ್ಳಿ, ಜೇಡಿಗದ್ದೆ, ಕಾಡುಮನೆ, ಕುಮಾರಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರ ಬದುಕು ಮತ್ತು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
94ಸಿ ಹಕ್ಕುಪತ್ರ, ಭೂಮಿಗೆ ಸಂಬಂಧಿಸಿದ ಸಮಿತಿಗಳಲ್ಲಿ ಅರ್ಜಿಗಳ ವಿಲೇವಾರಿ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೂ ಸೆಕ್ಷನ್–4 ಹಾಗೂ ಡೀಮ್ಡ್ ಫಾರೆಸ್ಟ್ ಸಮಸ್ಯೆಗಳು ಅಡ್ಡಿಯಾಗುತ್ತಿವೆ. ಹೀಗಾಗಿ ಕಸ್ತೂರಿರಂಗನ್ ವರದಿಯ ಅನುಷ್ಠಾನಕ್ಕೂ ಮುನ್ನ ಈಗಾಗಲೇ ಇರುವ ಅರಣ್ಯ ಸಂಬಂಧಿತ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದರು.‘ಜನರ ಬದುಕು ನಮಗೆ ಮುಖ್ಯ’“ಆಡಳಿತ ಪಕ್ಷವಾಗಲಿ, ಪ್ರತಿಪಕ್ಷವಾಗಲಿ ನಮಗೆ ಮಲೆನಾಡಿನ ಜನರ ಬದುಕು ಮುಖ್ಯ. ಕೇವಲ ಉಪಗ್ರಹ ಚಿತ್ರಗಳ ಆಧಾರದ ಮೇಲೆ ರೂಪಿಸಿರುವ ಸಮೀಕ್ಷೆಯನ್ನು ಯಥಾವತ್ತಾಗಿ ಜಾರಿಗೊಳಿಸಬಾರದು. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಎಲ್ಲಿ ನೈಜ ಅರಣ್ಯವಿದೆ, ಎಲ್ಲಿ ಜನವಸತಿ ಇದೆ, ಎಲ್ಲಿ ಕೃಷಿ ಮತ್ತು ತೋಟಗಾರಿಕೆ ನಡೆಯುತ್ತಿದೆ ಎಂಬುದನ್ನು ಭೌತಿಕವಾಗಿ ಪರಿಶೀಲಿಸಬೇಕು. ನಂತರವೇ ವೈಜ್ಞಾನಿಕ ನಿರ್ಧಾರ ಕೈಗೊಳ್ಳಬೇಕು,” ಎಂದು ಸಿಮೆಂಟ್ ಮಂಜು ಒತ್ತಾಯಿಸಿದರು.
ಆಲೂರು ತಾಲೂಕಿನ ಒಂದು ಗ್ರಾಮ ಹಾಗೂ ಸಕಲೇಶಪುರ ತಾಲೂಕಿನ ಸುಮಾರು 30 ಗ್ರಾಮಗಳಿಗೆ ಸಂಬಂಧಿಸಿದಂತೆ ಕಸ್ತೂರಿರಂಗನ್ ವರದಿಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸಬೇಕು. ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ತಲೆತಲಾಂತರಗಳಿಂದ ಮಲೆನಾಡಿನಲ್ಲಿ ಬದುಕುತ್ತಿರುವ ರೈತರು ಮತ್ತು ಬೆಳೆಗಾರರ ಬದುಕಿಗೆ ತೊಂದರೆಯಾಗಬಾರದು. “ಅರಣ್ಯವೂ ಉಳಿಯಬೇಕು, ಮಲೆನಾಡಿನ ಜನರ ಬದುಕೂ ಉಳಿಯಬೇಕು. ವಾಸ್ತವ ಪರಿಸ್ಥಿತಿ ಆಧರಿಸಿ ವೈಜ್ಞಾನಿಕ ಭೌತಿಕ ಸಮೀಕ್ಷೆ ನಡೆಸಿ ಜನರಿಗೆ ನ್ಯಾಯ ಒದಗಿಸಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದರು.
