
ಚನ್ನರಾಯಪಟ್ಟಣ: ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ಕೃಷಿ ಕಾಲೇಜಿನ ಕೃಷಿ ವಿದ್ಯಾರ್ಥಿಗಳು ಹಾಗೂ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳ ವತಿಯಿಂದ ಬೀಜಾಮೃತ ತಯಾರಿಕೆ ಹಾಗೂ ಬೀಜೋಪಚಾರ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನೈಸರ್ಗಿಕ ಕೃಷಿಯಲ್ಲಿ ಪ್ರಮುಖವಾದ ಬೀಜೋಪಚಾರ ವಿಧಾನವಾಗಿರುವ ಬೀಜಾಮೃತವನ್ನು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದ ಕಡಿಮೆ ವೆಚ್ಚದಲ್ಲಿ ತಯಾರಿಸಿಕೊಳ್ಳಬಹುದಾಗಿದೆ. ಸಾಮಾನ್ಯವಾಗಿ 20 ಲೀಟರ್ ನೀರಿಗೆ ಸುಮಾರು 5 ಕೆ.ಜಿ. ತಾಜಾ ಗೋಮಯ, 5 ಲೀಟರ್ ಗೋಮೂತ್ರ ಹಾಗೂ ಸುಮಾರು 50 ಗ್ರಾಂ ಸುಣ್ಣವನ್ನು ಬಳಸಬಹುದು. ಮೊದಲು ಸುಣ್ಣವನ್ನು ನೀರಿನಲ್ಲಿ ಪ್ರತ್ಯೇಕವಾಗಿ ಕರಗಿಸಿ ಒಂದು ರಾತ್ರಿ ಇಟ್ಟು, ನಂತರ ನೀರಿಗೆ ಗೋಮಯ ಮತ್ತು ಗೋಮೂತ್ರವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಕೊನೆಯಲ್ಲಿ ಸುಣ್ಣದ ದ್ರಾವಣವನ್ನು ಸೇರಿಸಿ ಚೆನ್ನಾಗಿ ಕಲಸಬೇಕು.
ಬಿತ್ತನೆಗೆ ಮುನ್ನ ಬೀಜಗಳನ್ನು ಬೀಜಾಮೃತದಲ್ಲಿ ನೆನೆಸಿ, ನಂತರ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬಹುದು. ಸಣ್ಣ ಬೀಜಗಳಿಗೆ ದ್ರಾವಣವನ್ನು ಲಘುವಾಗಿ ಲೇಪಿಸುವ ರೀತಿಯಲ್ಲಿಯೂ ಬಳಸಬಹುದು. ಬೀಜಕ್ಕೆ ಹಾನಿಯಾಗದಂತೆ ಸೂಕ್ತ ಪ್ರಮಾಣದಲ್ಲಿ ಬಳಕೆ ಮಾಡುವುದು ಮುಖ್ಯವಾಗಿದೆ.ಬೀಜಾಮೃತವು ಉತ್ತಮ ಮೊಳಕೆಯೊಡೆಯುವಿಕೆಗೆ ಸಹಕಾರಿಯಾಗುವುದರ ಜೊತೆಗೆ, ರೈತರು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದ ತಯಾರಿಸಿಕೊಳ್ಳಬಹುದಾದ್ದರಿಂದ ವೆಚ್ಚ ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ.
ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಗಳಿಗೆ ಇದು ಹೊಂದಿಕೊಳ್ಳುತ್ತದೆ.ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ರಾಮದ ರೈತರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬೀಜಾಮೃತ ತಯಾರಿಕೆ ಹಾಗೂ ಬೀಜೋಪಚಾರದ ಕುರಿತು ಮಾಹಿತಿ ಪಡೆದುಕೊಂಡರು. ಗುಣಮಟ್ಟದ ಬೀಜದೊಂದಿಗೆ ಸೂಕ್ತ ಬೀಜೋಪಚಾರವನ್ನು ಅಳವಡಿಸಿಕೊಂಡರೆ ಆರೋಗ್ಯಕರ ಸಸಿಗಳ ಸ್ಥಾಪನೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಲಾಯಿತು.
