
ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಬಿಸಿಲೆ, ಕಾಡುಮನೆ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಬೆಳೆಯುವ ಬೆತ್ತದ ತಳಿಗಳನ್ನು ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಬಾಳೆಗದ್ದೆ ಗ್ರಾಮದ ಜಾವಿದ್ ಎಂಬವರು ಅಸ್ಸಾಂ ಮೂಲದ ಕಾರ್ಮಿಕರನ್ನು ಬಳಸಿಕೊಂಡು ಹಲವು ವರ್ಷಗಳಿಂದ ಅರಣ್ಯ ಪ್ರದೇಶಗಳಿಂದ ಬೆತ್ತದ ತಳಿಗಳನ್ನು ಕಡಿದು, ವಾಹನಗಳ ಮೂಲಕ ಸಾಗಿಸಿ ಮನೆಯ ಸಮೀಪದಲ್ಲಿ ಸಂಗ್ರಹಿಸಿ ಒಣಗಿಸುತ್ತಿದ್ದಾರೆ ಎಂದು ಹ್ಯೂಮನ್ ರೈಟ್ಸ್ ಡಿಫೆನ್ಸ್ ಆರ್ಗನೈಸೇಷನ್‌ನ ಹಾಸನ ಜಿಲ್ಲಾ ಅಧ್ಯಕ್ಷರು ಆರೋಪಿಸಿದ್ದಾರೆ.
ನಂತರ ಈ ಬೆತ್ತವನ್ನು ಬಳಸಿ ವಿವಿಧ ರೀತಿಯ ಫರ್ನಿಚರ್ ಹಾಗೂ ಲಾಠಿಗಳನ್ನು ತಯಾರಿಸಿ ರಾಜ್ಯದ ವಿವಿಧೆಡೆ ಮಾರಾಟ ಮಾಡಲಾಗುತ್ತಿದೆ. ಈ ಚಟುವಟಿಕೆಗೆ ಸಂಬಂಧಿಸಿದಂತೆ ಯಾವುದೇ ಇಲಾಖೆಯಿಂದ ಪರವಾನಗಿ ಪಡೆದಿರುವ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಅರಣ್ಯ ಸಂಪತ್ತನ್ನು ಅಕ್ರಮವಾಗಿ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಸಾರ್ವಜನಿಕರು ಮಾಡಿದ್ದಾರೆ.
ಅರಣ್ಯದ ಅಮೂಲ್ಯ ಸಂಪತ್ತಾಗಿರುವ ಬೆತ್ತದ ತಳಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅರಣ್ಯ ಪ್ರದೇಶದಿಂದ ಬೆತ್ತವನ್ನು ಕಡಿದು ಸಾಗಿಸುವುದು ಹಾಗೂ ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ಆರೋಪ ಸಾಬೀತಾದಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಕಲೇಶಪುರದ ಸಾರ್ವಜನಿಕರು ಹಾಗೂ ಹ್ಯೂಮನ್ ರೈಟ್ಸ್ ಡಿಫೆನ್ಸ್ ಆರ್ಗನೈಸೇಷನ್ ಆಗ್ರಹಿಸಿದೆ.ಈ ಕುರಿತು ಅರಣ್ಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿ, ಬೆತ್ತದ ಕಡಿತ ಮತ್ತು ಸಾಗಾಟಕ್ಕೆ ಅಗತ್ಯ ಪರವಾನಗಿ ಇದೆಯೇ ಎಂಬುದನ್ನು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.



