ಹಾಸನ: ಕಾಡಾನೆ ತುಳಿತದಿಂದ ಮಹಿಳೆ ಸಾವನ್ನಪ್ಪಿದ ಘಟನೆ ಸಂಬಂಧ ಪ್ರತಿಭಟನೆ ಕೈಗೊಂಡಿದ್ದ 11 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ಜಿಲ್ಲೆಯ ಸಕಲೇಶಪುರ ತಾಲೂಕಿನ ವಡೂರು ಗ್ರಾಮದಲ್ಲಿ ಕವಿತಾ ಎಂಬ ಮಹಿಳೆ ಮೇಲೆ ಆನೆ ದಾಳಿ ಮಾಡಿ ಬಲಿ ಪಡೆದಿತ್ತು. ಇನ್ನು ಈ ಸಂಬಂಧ ಕೆಲ ಮಲೆನಾಡು ಭಾಗದ ಸ್ಥಳೀಯರು ಹಾಗೂ ಹೋರಾಟಗಾರರು ಹಾಸನದ ಸರ್ಕಾರಿ ಆಸ್ಪತ್ರೆಯ ಮುಂದೆ ಜಮಾಯಿಸಿ ಪ್ರತಿಭಟನೆ ಮಾಡಲು ಮುಂದಾಗಿದ್ದರು.

ಈ ವೇಳೆ ಅಧಿಕಾರಿಗಳು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಪೊಲೀಸರು ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿ ನಿನ್ನೆ(ಶುಕ್ರವಾರ) ತಡರಾತ್ರಿ 11 ಮಂದಿಯನ್ನು ಬಂಧಿಸಿದ್ದಾರೆ.

ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ ಸಂಬಂಧ ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಪ್ರತಿಕ್ರಿಯಿಸಿ ಇದೊಂದು ಬಹಳ ಖಂಡನೀಯ ಘಟನೆಯಾಗಿದ್ದು, ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಮುಂದಾಗಿದೆ.

ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಸಾಕಷ್ಟು ಜನರು ಬಲಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬೃಹತ್ ಮಟ್ಟದ ಹೋರಾಟವು ಕೂಡ ನಡೆದಿದೆ. ಆದರೆ ಯಾವ ಸರ್ಕಾರವು ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವ ಉದಾಹರಣೆಗಳಿಲ್ಲ ಎಂದರು.

ಕಳೆದ ಬಿಜೆಪಿ ಸರ್ಕಾರದಲ್ಲೂ ಬೃಹತ್ ಮಟ್ಟದ ಹೋರಾಟ ನಡೆದಿದ್ದು, ಮಧ್ಯರಾತ್ರಿ ಎರಡು ಗಂಟೆಯಲ್ಲಿ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಸ್ಥಳಕ್ಕೆ ಆಗಮಿಸಿ ಹೋರಾಟಗಾರರ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ನಂತರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರವನ್ನು ನೀಡಿದ್ದರು.

ಅಂತಹ ಸಂದರ್ಭದಲ್ಲಿಯೇ ಪ್ರತಿಭಟನಾಕಾರರ ಮೇಲೆ ಯಾವ ಕ್ರಮ ಜರುಗಿಸಲಿಲ್ಲ. ಆದರೆ ಸರ್ಕಾರದ ಗಮನ ಸೆಳೆಯಲು ಹೋರಾಟ ಮಾಡಲು ಮುಂದಾದವರ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ನಾನು ತಾಲೂಕಿನಲ್ಲಿ ಸಭೆ ನಡೆಸಿ ಮುಂದಿನ ಹೋರಾಟದ ಹಾದಿ ಹೇಗಿರಬೇಕು ಎಂದು ತೀರ್ಮಾನ ಮಾಡುತ್ತೇನೆ ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *