ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಎಂದರೆ, ಹಿಂದೆಲ್ಲ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕ್ ನಡುವಿನ ಪಂದ್ಯ ಮಾತ್ರ ಹೈ-ವೋಲ್ಟೇಜ್ನಿಂದ ಕೂಡಿರುತಿತ್ತು. ಆದರೆ ಈಗ ಇದರ ಜತೆಗೆ ಪಾಕಿಸ್ತಾನ-ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ-ಬಾಂಗ್ಲಾದೇಶ ಪಂದ್ಯಗಳೂ ಅದೇ ರೀತಿ ಪ್ರೇಕ್ಷಕರ ಕುತೂಹಲ ಕೆರಳಿಸಲಿವೆ.
ಈ ತಂಡಗಳ ಆಟಗಾರರ ನಡುವೆ ಇತ್ತೀಚೆಗಿನ ವರ್ಷಗಳಲ್ಲಿ ಉಂಟಾಗಿರುವ ಬಿಸಿಬಿಸಿ ಚಕಮಕಿಗಳು ಮತ್ತು ಪ್ರೇಕ್ಷಕರೂ ಅದಕ್ಕೆ ತುಪ್ಪ ಸುರಿದಿರುವುದು ವೈರತ್ವವನ್ನು ಹೆಚ್ಚಿಸಿದೆ. ಬಾಂಗ್ಲಾ ಆಟಗಾರರ ನಾಗಿನ್ ನೃತ್ಯದಿಂದಾಗಿ ಶ್ರೀಲಂಕಾ ತಂಡ ಕೆರಳಿದ್ದು, ಉಭಯ ದೇಶಗಳ ಅಭಿಮಾನಿಗಳೂ ಈ ಬಗ್ಗೆ ಹೆಚ್ಚಿನ ಕುತೂಹಲ ಹೊಂದಿದ್ದಾರೆ.
ಗುರುವಾರ ಶ್ರೀಲಂಕಾ-ಬಾಂಗ್ಲಾದೇಶ ತಂಡಗಳು ಕ್ಯಾಂಡಿಯಲ್ಲಿ ನಡೆಯಲಿರುವ ಟೂರ್ನಿಯ 2ನೇ ಪಂದ್ಯದಲ್ಲಿ ಮೊದಲ ಬಾರಿ ಮುಖಾಮುಖಿ ಆಗಲಿವೆ. ಇವೇ ಎರಡು ತಂಡಗಳು ಸೂಪರ್-4 ಹಂತಕ್ಕೇರಿದರೆ, ಸೆಪ್ಟೆಂಬರ್ 9ರಂದು ಮತ್ತೊಮ್ಮೆ ಕೊಲಂಬೊದಲ್ಲಿ ಮುಖಾಮುಖಿ ಆಗಲಿವೆ.
ಇನ್ನು ಉಭಯ ದೇಶಗಳ ಆಟಗಾರರ ಕಚ್ಚಾಟ ಮತ್ತು ಕಳೆದ ವರ್ಷ ಏಷ್ಯಾಕಪ್ ವೇಳೆ ಸ್ಟೇಡಿಯಂನಲ್ಲಿ ಉಭಯ ದೇಶಗಳ ಪ್ರೇಕ್ಷಕರೂ ಜಗಳವಾಡಿಕೊಂಡ ಬಳಿಕ ಪಾಕಿಸ್ತಾನ-ಅಫ್ಘಾನಿಸ್ತಾನ ನಡುವಿನ ಕಾದಾಟವೂ ಕುತೂಹಲ ಕೆರಳಿಸಲಾರಂಭಿಸಿದೆ.
ಇತ್ತೀಚೆಗೆ ನಡೆದ 3 ಪಂದ್ಯಗಳ ಸರಣಿಯಲ್ಲಿ ಅಫ್ಘಾನಿಸ್ತಾನ ಸೋತರೂ, ನಿಕಟ ಪೈಪೋಟಿ ಒಡ್ಡಿತ್ತು. ಟೂರ್ನಿಯ ಮೊದಲ ಹಂತದಲ್ಲಿ ಪಾಕ್-ಆಫ್ಘನ್ ಪಂದ್ಯ ಇರುವುದಿಲ್ಲ. ಒಂದು ವೇಳೆ ಅಫ್ಘಾನಿಸ್ತಾನ ಸೂಪರ್-4 ಹಂತಕ್ಕೇರಿದೆ, ಸೆಪ್ಟೆಂಬರ್ 6 ಅಥವಾ ಸೆಪ್ಟೆಂಬರ್ 14ರಂದು ಉಭಯ ದೇಶಗಳ ಮುಖಾಮುಖಿ ನಿರೀಕ್ಷೆ ಇದೆ.3 ಬಾರಿ ಇಂಡೋ-ಪಾಕ್ ಫೈಟ್?ಟೂರ್ನಿಯ ಸ್ವರೂಪದ ಅನ್ವಯ ಭಾರತ-ಪಾಕ್ ತಂಡಗಳು ಕನಿಷ್ಠ 2 ಬಾರಿ ಮುಖಾಮುಖಿ ಆಗುವುದು ನಿಶ್ಚಿತವೆನಿಸಿದೆ.
ಶನಿವಾರ ಟೂರ್ನಿಯ ಮೊದಲ ಹಂತದಲ್ಲಿ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿ ಆಗಲಿವೆ. ಸೂಪರ್-4 ಹಂತದಲ್ಲಿ ಸೆಪ್ಟೆಂಬರ್ 10ರಂದು ಭಾರತ-ಪಾಕ್ (ಎ1-ಎ2) ತಂಡಗಳು 2ನೇ ಬಾರಿ ಸೆಣಸಲಿವೆ. ಉಭಯ ತಂಡಗಳೂ ಫೈನಲ್ಗೇರಿದರೆ, ಸೆಪ್ಟೆಂಬರ್ 17ರಂದು 3ನೇ ಬಾರಿ ಮುಖಾಮುಖಿ ಆಗಲಿವೆ.