
ಸಕಲೇಶಪುರ : ತಾಲ್ಲೂಕಿನ ಸಣ್ಣಪುಟ್ಟ ಹಳ್ಳಿಗಳ ಯುವಕರು ತಮ್ಮ ಪರಿಶ್ರಮದಿಂದ ವಿದ್ಯಾಭ್ಯಾಸ ಮುಗಿಸಿ ಜೀವನೋಪಾಯಕ್ಕೆ ಬೆಂಗಳೂರು ಎಂಬ ಮಹಾನಗರಿಯನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿರುವ ತಾಲೂಕಿನ 10,000ಕ್ಕೂ ಹೆಚ್ಚು ಯುವಕರು ತಮ್ಮ ಊರಿನ ಬಗ್ಗೆ ಅಭಿಮಾನ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಮಲೆನಾಡ ಸಮಾನಮನಸ್ಕರೆಲ್ಲಾ ಒಂದೆಡೆ ಸೇರಿ ಮಲ್ನಾಡ್ ಯೂಥ್ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.
ಈ ನಿಟ್ಟಿನಲ್ಲಿ ಇವರ ಅಭಿವೃದ್ಧಿಯ ಕೆಲಸಗಳು ತಮ್ಮ ಊರಿನಲ್ಲಿ ಆಗಬೇಕು ಎಂದು ಚಿಂತನೆ ಮಾಡುತ್ತಿದ್ದು, ಎಲ್ಲಾ ಸದಸ್ಯರು ಶುಕ್ರವಾರ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುವರನ್ನು ಭೇಟಿ ಮಾಡಿ ತಮ್ಮ ಊರು ಹಾಗೂ ತಾಲ್ಲೂಕಿನ ಅಭಿವೃದ್ಧಿಗೆ ವಿವಿಧ ಹೊಸ ಯೋಜನೆಗಳನ್ನು ತರುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಸಕಲೇಶಪುರವನ್ನು ಮತ್ತಷ್ಟು ಪ್ರವಾಸಿ ತಾಣವನಾಗಿ ಮಾಡಲು, ಹಾಗೂ ಸಕಲೇಶಪುರದ ಬಸ್ ನಿಲ್ದಾಣದ ಅಭಿವೃದ್ಧಿ ಹಾಗೂ ಶೌಚಾಲಗಳ ಸ್ವಚ್ಛತೆ ಸೇರಿದಂತೆ ಮಲೆನಾಡ ಭಾಗದಲ್ಲಿ ಅತಿ ಹೆಚ್ಚು ಕಾಡಾನೆ ಸಮಸ್ಯೆಯಿಂದ ಬಳಲುತ್ತಿರುವ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರದಕ್ಕೆ ಮನವರಿಕೆ ಮಾಡಿ ಪರಿಹಾರ ಮಾಡಿಕೊಡಬೇಕೆಂದು ಕೇಳಿಕೊಂಡರು.
ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಶಾಸಕರು ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸುತ್ತಿದ್ದು , ಮಲೆನಾಡ ಯೂತ್ ಅಸೋಸಿಯೇಷನ್ ಅವರ ಬೇಡಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸರ್ಕಾರದ ಮುಂದೆ ತಂದು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣ ತೊಡುತ್ತೇನೆ ಎಂದು ಈ ಮೂಲಕ ಮಲ್ನಾಡ್ ಯೂತ್ ಅಸೋಸಿಯೇಷನ್ ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಲ್ನಾಡ್ ಯೂತ್ಸ್ ಅಸೋಸಿಯೇಷನ್ ಸಂಸ್ಥಾಪಕರಾದ ಕಾಮನಹಳ್ಳಿ ಕೀರ್ತಿ, ಅಭಿ, ಅಂಕುಶ್, ಗಣೇಶ್, ಕೀರ್ತಿ, ಲಕ್ಷ್ಮೀಶ್, ದಿಲೀಪ್, ಅಶೋಕ್ ಇದ್ದರು.

