
ಸಕಲೇಶಪುರ : 73 ವರ್ಷದ ವೃದ್ಧ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿರುವ ಪೈಶಾಚಿಕ ಕೃತ್ಯ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಮನನೊಂದ ಬಾಲಕಿಯ ತಾಯಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಾಲ್ಲೂಕಿನ ಮೀಸೆ ಮಂಜಯ್ಯ (73) ಅತ್ಯಾಚಾರ ಎಸಗಿದ ಕೀಚಕ.ಪಕ್ಕದ ಮನೆಯ ಬಾಲಕಿಯನ್ನು ಆರೋಪಿ ಮಂಜಯ್ಯ ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ.
ಇತ್ತೀಚೆಗೆ ಬಾಲಕಿಯ ದೇಹದಲ್ಲಿ ಉಂಟಾದ ಬದಲಾವಣೆಯನ್ನು ಗುರುತಿಸಿ, ಪೋಷಕರು ವಿಚಾರಿಸಿ, ತಪಾಸಣೆ ನಡೆಸಿದಾಗ ಎರಡು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿದೆ ಬಂದಿದೆ. ವಿಷಯ ತಿಳಿದು ಆಘಾತಕ್ಕೊಳಗಾದ ಬಾಲಕಿಯ ತಾಯಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಪಟ್ಟಣದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲ್ಲೂಕಿನಲ್ಲಿ ಏಕಾಂಗಿ ಪ್ರತಿಭಟನೆ ನಡೆಸುತ್ತಾ ಗುರುತಿಸಿಕೊಂಡಿದ್ದ ಆರೋಪಿ ಮೀಸೆ ಮಂಜಯ್ಯ, ಇತ್ತೀಚೆಗೆ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಅಲ್ಲದೆ ಅಸಹಾಯಕ ಮಹಿಳೆಯರಿಗೆ ವಿಧವಾ ವೇತನ, ಪಿಂಚಣಿ ಹಣ ಬರುವಂತೆ ಮಾಡಿಸಿಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ.ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ತಪಾಸಣೆ ನಡೆಸಿ ಬಾಲಮಂದಿರದ ವಶಕ್ಕೆ ನೀಡಲಾಗಿದೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
