
ಹಾಸನ :- ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಕ್ಷೇತ್ರದ ಶಾಸಕರಾದ ಹೆಚ್.ಪಿ. ಸ್ವರೂಪ್ ಅವರು ಹಾಸನ ನಗರ ವೀಕ್ಷಣೆ ಮಾಡಿ, ಕಸ ಬಿಸಾಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ಆಯುಕ್ತರಾದ ಸತೀಶ್ ಕುಮಾರ್ ಅವರಿಗೆ ಸೂಚಿಸಿದರು.
ಎಲ್ಲೆಂದರಲ್ಲಿ ಕಸ ಎಸೆದು ಗಬ್ಬು ವಾಸನೆ ಹೊಡೆಯುತ್ತಿದ್ದರೂ ನಗರಸಭೆ ಯಾವ ಕ್ರಮಕೈಗೊಂಡಿರುವುದಿಲ್ಲ ಎಂದು ಹಲವು ದಿನಗಳಿಂದ ಶಾಸಕರಿಗೆ ದೂರುಗಳು ಬರುತ್ತಲೆ ಇತ್ತು. ಇದನ್ನರಿತ ಶಾಸಕರು ಮಂಗಳವಾರದಂದು ಬೆಳಿಗ್ಗೆ ಹಾಸನ ನಗರದ ವಿವಿಧ ವಾರ್ಡ್‌ಗಳಿಗೆ ತೆರಳಿ ಕಸ ವೀಕ್ಷಣೆ ಮಾಡಿದರು.
ನಗರದ ರಿಂಗ್ ರಸ್ತೆಗೆ ಬಂದಾಗ ಕಸದ ರಾಶಿ ರಾಶಿ ಹಾಕಿರುವುದು ಕಂಡು ಬಂದಿತು. ಜೊತೆಯಲ್ಲಿಯೇ ಇದ್ದ ನಗರಸಭೆ ಆಯುಕ್ತರಾದ ಸತೀಶ್ ಅವರಿಗೆ ಶಾಸಕರು ಕೆಲ ಸಲಹೆಯನ್ನು ನೀಡಿದರು.
ಇನ್ನು ಮುಂದೆ ಯಾರಾದರೂ ಕಸ ಎಲ್ಲೆಂದರಲ್ಲಿ ಎಸೆಯುವುದ ಕಂಡು ಬಂದರೆ ಯಾವ ಮುಲಾಜು ಇಲ್ಲದೇ ಅವರ ಮೇಲೆ ಶಿಸ್ತುಕ್ರಮ ಜರುಗಿಸುವ ಮೂಲಕ ಮತ್ತೊಬ್ಬರೂ ಜಾಗೃತರಾಗುವಂತೆ ಮಾಡಿ ಎಂದು ಹೇಳಿದರು.

