
ಹಾಸನ : ರಾಜ್ಯವು ಬರಗಾಲದ ಛಾಯೆಯಲ್ಲಿದ್ದು, ಪರಿಹಾರಕ್ಕೆ ಕೇಂದ್ರ ಸರಕಾರದ ನಿರೀಕ್ಷೆಯಲ್ಲಿದ್ದೇವೆ. ಒತ್ತಡ ತಂದು ತರುವ ಕೆಲಸ ಮಾಡಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಹಾಸನಾಂಬೆ ದರ್ಶನದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಹಾಸನಾಂಬೆ ದೇವಿ ದರ್ಶನಕ್ಕೆ ಮೊದಲ ಭಾರಿಗೆ ಆಗಮಿಸಿದ್ದೇನೆ.
ನಮ್ಮ ನಾಡಿನ ಜನರಿಗೆ ಒಳ್ಳೆಯದಾಗಲಿ ಅಂತಾ ಪ್ರಾರ್ಥಿಸಿದ್ದೇನೆ. ಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ಹಾಸನಕ್ಕೆ ಆಗಮಿಸಿದ್ದೇನೆ. ನಾಡಿನಲ್ಲಿ ಬರಗಾಲದ ಛಾಯೆ ಇದೆ. ಮಳೆ ಎಲ್ಲ ಕಡೆ ಚೆನ್ನಾಗಿ ಆಗಲಿ ಅಂತಾ ಬೇಡಿದ್ದೇನೆ. ನಾಡಿನ ಜನರಿಗೆ ಒಳ್ಳೆಯ ಆಡಳಿತ ನಡೆಸುವ ಶಕ್ತಿ ಕೊಡಲಿ ಅಂತಾ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಕೇಂದ್ರ ಸರ್ಕಾರಿಂದ ರಾಜ್ಯಕ್ಕೆ ಬರಪರಿಹಾರ ಏನು ಬಂದಿಲ್ಲ. ರಾಜ್ಯಸರ್ಕಾರ ಅಗತ್ಯವಾದ ಹಣವನ್ನ ಜಿಲ್ಲಾಧಿಕಾರಿ ಖಾತೆಯ ಹಣವನ್ನ ಬಳಸಿಕೊಂಡಿದ್ದೇವೆ. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಏನು ಮಾಡಬೇಕೋ ಅವೆಲ್ಲವನ್ನೂ ಮಾಡಿದ್ದೇವೆ.
ಪರಿಹಾರದ ಹಣಕ್ಕಾಗಿ ಕೇಂದ್ರ ಸರ್ಕಾರದ ನಿರೀಕ್ಷೆಯಲ್ಲಿದ್ದೇವೆ. ಬಿಜೆಪಿಯ ಸಚಿವರುಗಳು ಕೇಂದ್ರ ಸರ್ಕಾರದಿಂದ ಹಣವನ್ನು ತರಿಸುವ ಪ್ರಯತ್ನ ಮಾಡಬೇಕು. ರಾಜಕಾರಣ ಮಾಡೋದಕ್ಕೆ ಹೇಳಬಾರದು. ಶೋಬಾಕರಂದ್ಲಾಜೆ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ.
ಚಿಕ್ಕಮಗಳೂರು ಎಂಪಿ ಆಗಿದ್ದಾರೆ ಅಲ್ಲಿಯೂ ಕೂಡಾ ಬರಗಾಲ ಇದೆ.ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ತರಬೇಕು. ಬರಗಾಲಕ್ಕೆ ಹಣ ಕೊಡೋದು ಕೇಂದ್ರ ಸರ್ಕಾರದ ಜವಾಬ್ದಾರಿ. ಕರ್ನಾಟಕ ಕೇಂದ್ರಕ್ಕೆ ಹಣ ಕೊಡೋದ್ರಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಇದೆ ವೇಳೆ ಹೇಳಿದರು.
ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ಗೋಪಾಲಸ್ವಾಮಿ, ಹೆಚ್.ಕೆ. ಮಹೇಶ್, ರಘು, ರಂಜಿತ್ ಇತರರು ಉಪಸ್ಥಿತರಿದ್ದರು.


