ಸಕಲೇಶಪುರ, ಜೂನ್ 30: ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ವೀರಮರಣ ಹೊಂದಿದ ಸಕಲೇಶಪುರದ ಹೆಮ್ಮೆಯ ಯೋಧ ಎ.ಕೆ. ಸಾಗರ್ ಅವರ 24ನೇ ವರ್ಷದ ಹುತಾತ್ಮ ದಿನಾಚರಣೆಯನ್ನು ಕೆಂಪೇಗೌಡ ಯುವ ಒಕ್ಕಲಿಗರ ವೇದಿಕೆ ವತಿಯಿಂದ ಮಂಗಳವಾರ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಪಟ್ಟಣದ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ವೀರಯೋಧ ಎ.ಕೆ. ಸಾಗರ್ ಅವರ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸಿ ಗೌರವ ನಮನ ಸಲ್ಲಿಸಲಾಯಿತು.

ಬಳಿಕ ಹುತಾತ್ಮರ ಸ್ಮರಣಾರ್ಥ ಮೌನಾಚರಣೆ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕೆಂಪೇಗೌಡ ಯುವ ಒಕ್ಕಲಿಗರ ವೇದಿಕೆಯ ಮಾಜಿ ಅಧ್ಯಕ್ಷ ಉದಯ್, “ದೇಶದ ಗಡಿಯನ್ನು ಕಾಯುವ ವೇಳೆ ತಮ್ಮ ಅಮೂಲ್ಯ ಪ್ರಾಣವನ್ನು ತ್ಯಾಗ ಮಾಡಿದ ಎ.ಕೆ. ಸಾಗರ್ ಅವರ ಬಲಿದಾನ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ದೇಶಭಕ್ತಿ, ಶೌರ್ಯ ಹಾಗೂ ರಾಷ್ಟ್ರಸೇವೆಯ ಮೌಲ್ಯಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು. ವೀರಯೋಧರ ತ್ಯಾಗವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ” ಎಂದು ಹೇಳಿದರು.

ಕೆಂಪೇಗೌಡ ಯುವ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ವಳಲಹಳ್ಳಿ ಪ್ರಸಾದ್ ಮಾತನಾಡಿ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧರ ಸೇವೆ ಮತ್ತು ತ್ಯಾಗವನ್ನು ಸಮಾಜ ಸದಾ ಗೌರವದಿಂದ ಸ್ಮರಿಸಬೇಕು. ಮುಂದಿನ ಪೀಳಿಗೆಗೆ ಅವರ ಜೀವನ ಸಂದೇಶವನ್ನು ತಲುಪಿಸುವ ಕೆಲಸ ಎಲ್ಲರೂ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವೇದಿಕೆಯ ಮಾಜಿ ಅಧ್ಯಕ್ಷ ವಿಶಾಲ್ ಗೌಡ, ನಿವೃತ್ತ ಯೋಧರಾದ ಎಸ್.ಕೆ. ಬೋರಣ್ಣ, ಚಂದ್ರಶೇಖರ್, ಲೋಹಿತ್ ಹಾಗೂ ರಾಘವೇಂದ್ರ, ಮಾಜಿ ಪ್ರಧಾನ ಕಾರ್ಯದರ್ಶಿ ದಯಾನಂದ, ಪುತ್ಥಳಿ ಅಧ್ಯಕ್ಷ ಕಡಗರಹಳ್ಳಿ ಅಶೋಕ್, ಪ್ರದೀಪ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದು ವೀರಯೋಧ ಎ.ಕೆ. ಸಾಗರ್ ಅವರಿಗೆ ಗೌರವ ನಮನ ಸಲ್ಲಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *